ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ 71,000 ಮಂದಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ. ( Rashtriya Rozgar Mela ) ಕೇಂದ್ರ ಸರ್ಕಾರದ ರೋಜ್ಗಾರ್ ಮೇಳದಲ್ಲಿ ಈ ವಿತರಣೆ ನಡೆದಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸರ್ಕಾರದ ಮಹತ್ತ್ವಾಕಾಂಕ್ಷೆಗೆ ಇದು ನಿದರ್ಶನ ( Rozgar Mela ) ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದಲ್ಲಿ 40 ಲಕ್ಷ ಸ್ಟಾರ್ಟಪ್‌ಗಳು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಭಾರತದಲ್ಲಿ ಸ್ಟಾರ್ಟಪ್ ಸಂಸ್ಕೃತಿ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಇದು ಬಿಂಬಿಸಿದೆ. ಭಾರತ ಈಗ ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.
ಸೌರಮಾನ ಯುಗಾದಿಯ ಸಂದರ್ಭ 70,000 ಯುವಜನತೆಗೆ ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಉದ್ಯೋಗ ಲಭಿಸಿದೆ. ಎನ್‌ಡಿಎ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸರ್ಕಾರಿ ಉದ್ಯೋಗಗಳ ವಿತರಣೆ ಚುರುಕಾಗಿದೆ. ಮಧ್ಯಪ್ರದೇಶದಲ್ಲಿ ಬುಧವಾರ ಒಂದೇ ದಿನ 22 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದರು.
ಭಾರತವು 15,000 ಕೋಟಿ ರೂ.ಗೂ ಹೆಚ್ಚು ರಕ್ಷಣಾ ಸಾಧನಗಳನ್ನು ರಫ್ತು ಮಾಡಿದೆ. ಹಲವಾರು ದಶಕಗಳಿಂದ ಭಾರತವು ರಕ್ಷಣಾ ಶಸ್ತ್ರಾಸ್ತ್ರಗಳಿಗೆ ಆಮದನ್ನೇ ಅವಲಂಬಿಸಿತ್ತು. ಆದರೆ ಈಗ ರಫ್ತು ಮಾಡುವ ಮಟ್ಟಕ್ಕೂ ಬೆಳೆದಿದೆ. 300ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳ ಆಮದನ್ನು ಸಂಪೂರ್ಣ ನಿಲ್ಲಿಸಿ, ಸ್ಥಳೀಯವಾಗಿಯೇ ತಯಾರಿಸಲಾಗುತ್ತಿದೆ. ನಾನಾ ವಲಯಗಳಲ್ಲಿ ದ್ರೋನ್ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ. 2014ರ ತನಕ 74 ಏರ್ ಪೋರ್ಟ್‌ಗಳು ಇದ್ದರೆ, ಈಗ 148 ಏರ್ ಪೋರ್ಟ್‌ಗಳು ಇವೆ ಎಂದು ವಿವರಿಸಿದರು.