Site icon Vistara News

SIP : ಮ್ಯೂಚುವಲ್‌ ಫಂಡ್‌ ಮೂಲಕ ಮೊದಲ ಬಾರಿಗೆ ಮಾರ್ಚ್‌ನಲ್ಲಿ 14,000 ಕೋಟಿ ರೂ. ಸಿಪ್‌ ಹೂಡಿಕೆಯ ಪ್ರವಾಹ

Mutual fund

ಮುಂಬಯಿ: ಮ್ಯೂಚುವಲ್‌ ಫಂಡ್‌ ಉದ್ದಿಮೆಗೆ ಕಳೆದ ಮಾರ್ಚ್‌ನಲ್ಲಿ ಮೊಟ್ಟ ಮೊದಲ ಬಾರಿಗೆ 14,000 ಕೋಟಿ ರೂ. ಹೂಡಿಕೆಯ ಪ್ರವಾಹವೇ ಕಳೆದ ಮಾರ್ಚ್‌ನಲ್ಲಿ ಸಿಪ್‌ ಮೂಲಕ (systematic investment plan) ಹರಿದು ಬಂದಿದೆ. ಕಾರ್ಪೊರೇಟ್‌ ಬಾಂಡ್‌ ಯೋಜನೆಗಳಲ್ಲಿ ಕೂಡ ಹೂಡಿಕೆಯ ಪ್ರಮಾಣದಲ್ಲಿ ಏರಿಕೆ ದಾಖಲಾಗಿತ್ತು. ರಿಟೇಲ್‌ ಹೂಡಿಕೆದಾರರು ಮಾರ್ಚ್‌ನಲ್ಲಿ 14,276 ಕೋಟಿ ರೂ. ಮೊತ್ತದ ಹೂಡಿಕೆಯನ್ನು ಸಿಪ್‌ ಮೂಲಕ (ವ್ಯವಸ್ಥಿತ ಹೂಡಿಕೆ ಯೋಜನೆ) ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿದ್ದಾರೆ.

ಕಳೆದ ಜನವರಿಯಲ್ಲಿ 14,276 ಕೋಟಿ ರೂ. ಹೂಡಿಕೆಯು ಸಿಪ್‌ ಮೂಲಕ ಹರಿದು ಬಂದಿತ್ತು ಎಂದು ಕೈಗಾರಿಕಾ ಮಂಡಳಿ ಎಎಂಎಫ್‌ಐ ಅಂಕಿ ಅಂಶಗಳು ತಿಳಿಸಿದೆ. ಮಾರ್ಚ್‌ನಲ್ಲಿ 22 ಲಕ್ಷ ಹೊಸ ಸಿಪ್‌ಗಳು ನೋಂದಣಿಯಾಗಿತ್ತು. ಒಟ್ಟು 6.4 ಕೋಟಿ ಅಕೌಂಟ್‌ಗಳು ಇವೆ. 2020ರ ಮಾರ್ಚ್‌ನಲ್ಲಿ 3 ಕೋಟಿ ಇದ್ದ ಅಕೌಂಟ್‌ಗಳು ಈಗ ಇಮ್ಮಡಿಯಾಗಿದೆ.

ಎಎಂಎಫ್‌ಐ ಮುಖ್ಯಸ್ಥ ಎನ್‌ಎಸ್‌ ವೆಂಕಟೇಶ್‌ ಪ್ರಕಾರ, ಕೋವಿಡ್‌ ಬಿಕ್ಕಟ್ಟಿನ ಬಳಿಕ ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯ ಹರಿವು ಹೆಚ್ಚಳವಾಗಿದೆ. 2022-23ರಲ್ಲಿ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮ್ಯೂಚುವಲ್‌ ಫಂಡ್‌ ವಲಯಕ್ಕೆ ಹರಿದು ಬಂದಿದೆ. ಕಾರ್ಪೊರೇಟ್‌ ಬಾಂಡ್‌ ವಲಯಕ್ಕೆ 15600 ಕೋಟಿ ರೂ. ಹರಿದು ಬಂದಿದೆ.‌

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವುದು 2023ರ ಮಾರ್ಚ್‌ 31ರಿಂದ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಣೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ನಾಮಿನೇಶನ್‌ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್‌, ಎಸ್ಸೆಮ್ಮೆಸ್‌ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.

2022ರ ಜೂನ್‌ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ನಾಮಿನೇಶನ್‌ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್‌ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್‌ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ.

ನಾಮಿನೇಶನ್‌ ಏಕೆ? ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್‌ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್‌ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್‌ ಫಂಡ್‌ ಸಂಸ್ಥೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲೂ ನಾಮಿನೇಶನ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು.

Exit mobile version