Site icon Vistara News

Adani Group : 22,000 ಕೋಟಿ ರೂ. ಸಾಲ ತೀರಿಸಿದ ಅದಾನಿ ಗ್ರೂಪ್‌, ಷೇರು ದರ ಜಿಗಿತ

Goutham Adani

ಮುಂಬಯಿ: ಅದಾನಿ ಸಮೂಹವು ( Adani Group) 22,000 ಕೋಟಿ ರೂ. ಸಾಲವನ್ನು ಮರು ಪಾವತಿಸುವ ಮೂಲಕ ಹೂಡಿಕೆದಾರರ ವಿಶ್ವಾಸ ಗಳಿಸುವು ನಿಟ್ಟಿನಲ್ಲಿ ಮುನ್ನಡೆದಿದೆ. ಕಳೆದ ಜನವರಿಯಲ್ಲಿ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್ ಹಿಂಡೆನ್‌ಬರ್ಗ್‌ನ ಸ್ಫೋಟಕ ವರದಿಯ ಬಳಿಕ ಹೂಡಿಕೆದಾರರ ವಿಶ್ವಾಸ ಗಳಿಕೆಗೆ ಅದಾನಿ ಗ್ರೂಪ್‌ ಸಾಲಗಳನ್ನು ಅವಧಿಗೆ ಮುನ್ನ ಮರು ಪಾವತಿಸಲು ಆದ್ಯತೆ ನೀಡಿದೆ. 1664 ಕೋಟಿ ರೂ. ಬಡ್ಡಿ ಸಹಿತ ಸಾಲವನ್ನು ಮರು ಪಾವತಿಸಲಾಗಿದೆ. ಸಮೂಹ ತನ್ನೆಲ್ಲ ಸಾಲವನ್ನು ಮರು ಪಾತಿಸಿಲ್ಲ, ಆದರೆ ಗಮನಾರ್ಹ ಮೊತ್ತವನ್ನು ಮರು ಪಾವತಿಸಿದೆ.

ಅದಾನಿ ಗ್ರೂಪ್‌ 2023ರ ಮಾರ್ಚ್‌ 31ರೊಳಗೆ ಮರು ಪಾವತಿಸಬೇಕಿದ್ದ ಸಾಲವನ್ನು ಮಾರ್ಚ್‌ 12ಕ್ಕೆ ಮರು ಪಾವತಿಸಿದೆ. ಅಂಬುಜಾ ಸಿಮೆಂಟ್‌ ಕಂಪನಿಯನ್ನು ಖರೀದಿಸಲು ಪಡೆದಿದ್ದ 700 ದಶಲಕ್ಷ ಡಾಲರ್‌ ಸಾಲವನ್ನೂ (5,740 ಕೋಟಿ ರೂ.) ಅದಾನಿ ಗ್ರೂಪ್‌ ಮರು ಪಾವತಿಸಿದೆ. ‌

ಹಿಂಡೆನ್‌ ಬರ್ಗ್‌ ವರದಿಯ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರು ದರ ಭಾರಿ ಕುಸಿತ್ಕಕೀಡಾಗಿತ್ತು. ಇದರ ಪರಿಣಾಮ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯದಲ್ಲಿ 11.8 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಹೂಡಿಕೆದಾರರ ವಿಶ್ವಾಸ ಗಳಿಸಲು ಅದಾನಿ ಗ್ರೂಪ್‌ ತನ್ನ ಸಾಲಗಳನ್ನು ಅವಧಿಗೆ ಮುನ್ನ ಮರು ಪಾವತಿಸಲು ಆದ್ಯತೆ ನೀಡಿದೆ. ಮತ್ತೊಂದು ಕಡೆ ಬ್ಯಾಂಕ್‌ಗಳು ಅದಾನಿ ಗ್ರೂಪ್‌ ಕಂಪನಿಗಳಿಗೆ ಹೊಸತಾಗಿ ಸಾಲ ನೀಡುತ್ತಿವೆ. ಅದಾನಿ ಗ್ರೂಪ್‌ನ ಒಟ್ಟಾರೆ ಆಸ್ತಿ ಮೌಲ್ಯ 4.23 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಹಿಂಡೆನ್‌ಬರ್ಗ್‌ ವರದಿಯ ಬಳಿಕ ಭಾರಿ ಕುಸಿತಕ್ಕೀಡಾಗಿದ್ದ ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳಲ್ಲಿ ಮೂರು ತಿಂಗಳಿನ ಹಿಂದೆ 15,000 ಕೋಟಿ ರೂ. ಹೂಡಿದ್ದ ಅನಿವಾಸಿ ಭಾರತೀಯ ಹೂಡಿಕೆದಾರ ರಾಜೀವ್‌ ಜೈನ್‌, ಇದೀಗ ಅಂದಾಜು 10,000 ಕೋಟಿ ರೂ. ಲಾಭ ಗಳಿಸಿದ್ದಾರೆ. (Adani stocks) ರಾಜೀವ್‌ ಜೈನ್‌ ಅವರು 15,000 ಕೋಟಿ ರೂ. ಹೂಡಿದ್ದರು. ಅದರ ಮೌಲ್ಯ ಈಗ 25,000 ಕೋಟಿ ರೂ.ಗೆ ಏರಿಕೆಯಾಗಿದೆ. ಸಾಲ ಮರು ಪಾವತಿ ಹಿನ್ನೆಲೆಯಲ್ಲಿ ಅದಾನಿ ಕಂಪನಿಗಳ ಷೇರು ದರಗಳು ಜಿಗಿಯಿತು. ಅದಾನಿ ಸಮೂಹ 2022-23ರ ಸಾಲಿನ ಅಂತ್ಯದ ವೇಳೆಗೆ ಒಟ್ಟು 2.27 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿತ್ತು.

ಹೂಡಿಕೆದಾರ ರಾಜೀವ್‌ ಜೈನ್‌ಗೆ 10,000 ಕೋಟಿ ರೂ. ಲಾಭ:

ರಾಜೀವ್‌ ಜೈನ್‌ (Rajiv Jain) ಅವರ ಜಿಕ್ಯೂಜಿ ಪಾರ್ಟ್‌ನರ್ಸ್‌ (GQG Partners) ಅದಾನಿ ಕಂಪನಿಗಳಲ್ಲಿ ಹೂಡಿದ್ದ ಮೊತ್ತದ ಮೌಲ್ಯ ಕಳೆದ ಮಾರ್ಚ್‌ 2ಕ್ಕೆ 15,446 ಕೋಟಿ ರೂ. ಆಗಿತ್ತು. ಮಂಗಳವಾರ ಅದರ ಮೌಲ್ಯ 25,515 ಕೋಟಿ ರೂ. ಆಗಿತ್ತು. ಅದಾನಿ ಸಮೂಹದ ಅದಾನಿ ಎಂಟರ್‌ಪ್ರೈಸ್‌, ಅದಾನಿ ಗ್ರೀನ್‌ ಎನರ್ಜಿ, ಅದಾನಿ ಪೋರ್ಟ್ಸ್‌ ಮತ್ತು ಅದಾನಿ ಟ್ರಾನ್ಸ್‌ಮಿಶನ್‌ನಲ್ಲಿ ರಾಜೀವ್‌ ಜೈನ್‌ ಕಂಪನಿ ಹೂಡಿಕೆ ಮಾಡಿತ್ತು.‌

ಅದಾನಿ ಗ್ರೂಪ್‌ನಲ್ಲಿ ಜಿಕ್ಯೂಜಿ ಪಾರ್ಟ್‌ನರ್ಸ್‌ ತನ್ನ ಹೂಡಿಕೆಯನ್ನು 10% ತನಕ ಏರಿಸಿದೆ. ಮುಂದಿನ ಐದು ವರ್ಷಗಳಲ್ಲಿ ಅದಾನಿ ಗ್ರೂಪ್‌ನಲ್ಲಿ ಅದಾನಿ ಕುಟುಂಬದ ಬಳಿಕ ಅತಿ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗುವುದಾಗಿ ರಾಜೀವ್‌ ಜೈನ್‌ ಹೇಳಿದ್ದಾರೆ.

ಇದನ್ನೂ ಓದಿ: Odisha Train Accident : ದುರಂತ ಸಂತ್ರಸ್ತರ ಅನಾಥ ಮಕ್ಕಳಿಗೆ ಶಿಕ್ಷಣ; ಗೌತಮ್ ಅದಾನಿ ಭರವಸೆ

Exit mobile version