Site icon Vistara News

Rs 233 Crore in 10 Mins : ಕೇವಲ 10 ನಿಮಿಷದಲ್ಲಿ ರೇಖಾ ಜುಂಜುನ್‌ವಾಲಾಗೆ 233 ಕೋಟಿ ಸಿಕ್ಕಿದ್ದು ಹೇಗೆ?

Rekha

#image_title

ಮುಂಬಯಿ: ಖ್ಯಾತ ಷೇರು ಹೂಡಿಕೆದಾರ, ದಿವಂಗತ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರ ಸಂಪತ್ತಿನಲ್ಲಿ ಗುರುವಾರ ಕೇವಲ 10 ನಿಮಿಷದಲ್ಲಿ 233 ಕೋಟಿ ರೂ. ಏರಿಕೆಯಾಯಿತು. ಅರೆ, ಇದು ಹೇಗೆ ಸಾಧ್ಯ ಎನ್ನುತ್ತೀರಾ? ಇದೆಲ್ಲವೂ ಅವರು ಹೊಂದಿರುವ ಷೇರುಗಳ ದರ ಜಿಗಿತದ ಎಫೆಕ್ಟ್.‌

ಷೇರು ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ವಹಿವಾಟು ಆರಂಭವಾದ ಹತ್ತೇ ನಿಮಿಷದಲ್ಲಿ ಟಾಟಾ ಗ್ರೂಪ್‌ನ ಟೈಟನ್‌ ಕಂಪನಿಯ ಷೇರು ದರ ಜಿಗಿಯಿತು. ಪ್ರತಿ ಷೇರಿನ ದರ 2,619 ರೂ.ಗೆ ವೃದ್ಧಿಸಿತು. ಇದರ ಪರಿಣಾಮ ರೇಖಾ ಜುಂಜುನ್‌ವಾಲಾ ಅವರ ಸಂಪತ್ತೂ ದಿಢೀರ್‌ ವೃದ್ಧಿಸಿತು. ಪ್ರತಿ ಷೇರಿಗೆ 49.70 ರೂ. ಹೆಚ್ಚಳವಾಯಿತು.

ರೇಖಾ ಜುಂಜುನ್‌ವಾಲಾ ಅವರು ಟೈಟನ್‌ ಕಂಪನಿಯ 4,58,95,970 ಷೇರುಗಳನ್ನು ಹೊಂದಿದ್ದಾರೆ. ಅಂದರೆ ಕಂಪನಿಯ 5.17 % ಷೇರುಗಳನ್ನು ಗಳಿಸಿದ್ದಾರೆ. ಷೇರು ದರ ಜಿಗಿತದ ಪರಿಣಾಮ ಅವರ ಸಂಪತ್ತಿನಲ್ಲಿ 233 ಕೋಟಿ ರೂ. ಹೆಚ್ಚಳವಾಯಿತು. ಪತಿ ರಾಕೇಶ್‌ ಜುಂಜುನ್‌ ವಾಲಾ ನಿಧನರಾದ ಬಳಿಕ ಅವರ ಷೇರುಗಳು ಪತ್ನಿ ರೇಖಾ ಅವರಿಗೆ ವರ್ಗಾವಣೆಯಾಗಿದೆ. 2022ರ ಫೋರ್ಬ್ಸ್‌ ಶ್ರೀಮಂತ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ.

ಟೈಟನ್‌ 2021-22ರ ನಾಲ್ಕನೇ ತ್ರೈಮಾಸಿಕದಲ್ಲಿ ಎರಡಂಕಿಯ ಆರೋಗ್ಯಕರ ಬೆಳವಣಿಗೆಯನ್ನು ದಾಖಲಿಸಿತ್ತು. ಕಂಪನಿಯ ವಾಚ್‌ ಮಾರಾಟ ವಹಿವಾಟು ಗಣನೀಯ ವೃದ್ಧಿಸಿತ್ತು. ಟೈಟನ್‌ ಕಂಪನಿಯು ಮುಖ್ಯವಾಗಿ ವಾಚು, ಆಭರಣ, ಐವೇರ್‌ ಉತ್ಪನ್ನಗಳ ಮಾರಾಟ ವಲಯದಲ್ಲಿ ಮುಂಚೂಣಿಯಲ್ಲಿದೆ.

63 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಜುಂಜುನ್‌ವಾಲಾ ಅವರು ತಮ್ಮ ಸ್ವಪ್ರಯತ್ನದಿಂದಲೇ ಷೇರು ಮಾರುಕಟ್ಟೆಯಲ್ಲಿ ಪಳಗಿದವರು. ಉದ್ಯಮಿಯಾಗಿ ಕಾರ್ಪೊರೇಟ್‌ ವಲಯ ಬೆರಗಾಗುವಂತೆ ಬೆಳೆದವರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮಗನಾಗಿದ್ದ ಜುಂಜುನ್‌ವಾಲಾ ಅವರು ಕೇವಲ 5,000 ರೂ. ಹೂಡಿಕೆಯಿಂದ ಷೇರು ವ್ಯವಹಾರವನ್ನು ಆರಂಭಿಸಿ, ಅಂತಿಮವಾಗಿ ಷೇರು ಪೇಟೆಯ ಸರದಾರರಾಗಿ 5.8 ಶತಕೋಟಿ ಡಾಲರ್‌ (ಸುಮಾರು 45,820 ಕೋಟಿ ರೂ.) ಸಂಪತ್ತಿಗೆ ಒಡೆಯರಾಗಿದ್ದರು. ಆಕಾಸ ಏರ್‌ಲೈನ್‌ ಸ್ಥಾಪನೆಗೆ ಹೂಡಿಕೆ ಮಾಡುವ ಮೂಲಕ ಅವರ ನಡೆ ಎಲ್ಲರನ್ನೂ ಬೆರಗಾಗಿಸಿತ್ತು.

Exit mobile version