Site icon Vistara News

Boost to Make in India : 36,400 ಕೋಟಿ ರೂ. ಮೌಲ್ಯದ ಡೀಲ್‌ಗಳಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

make in India

ನವ ದೆಹಲಿ: ಕೇಂದ್ರ ಸರ್ಕಾರವು 36,400 ಕೋಟಿ ರೂ. ಮೌಲ್ಯದ ರಕ್ಷಣಾ ಖರೀದಿ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಿದೆ. ಇದರಿಂದಾಗಿ ಭೂ ಸೇನೆ, ನೌಕಾ ಪಡೆ ಮತ್ತು ವಾಯುಸೇನೆಗೆ ( Boost to Make in India) ಹೆಚ್ಚಿನ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿದೆ. ಮತ್ತೊಂದು ಕಡೆ ಆತ್ಮನಿರ್ಭರ ಭಾರತಕ್ಕೆ (Aatmanirbhara Bharata ) ಪುಷ್ಟಿ ಸಿಗಲಿದೆ.

ಕೇಂದ್ರ ಸರ್ಕಾರ ಎರಡು ಆಕಾಶ್‌ ಏರ್‌ ಡಿಫೆನ್ಸ್‌ ಕ್ಷಿಪಣಿ ವ್ಯವಸ್ಥೆಯನ್ನು (Akash air defence missile systems) ಖರೀಸಲು, ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ (Bharat Dynamics Limited) ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೌಲ್ಯ 6,000 ಕೋಟಿ ರೂ.ಗಳಾಗಿದೆ.

ಮೇಕ್‌ ಇನ್‌ ಇಂಡಿಯಾಗೆ ಬಲ:

ಈ ಸುಧಾರಿತ ಕ್ಷಿಪಣಿ ಸಿಸ್ಟಮ್‌ಗಳು ಭಾರತೀಯ ಸೇನೆಗೆ ಯಾವುದೇ ಶತ್ರುವಿನ ವಿಮಾನ ಅಥವಾ ದ್ರೋನ್‌ ಅನ್ನು ಗಡಿಯಲ್ಲಿ ಹೊಡೆದುರುಳಿಸಲು ಸಹಕಾರಿಯಾಗಲಿದೆ. ಈ ಕ್ಲಿಯರೆನ್ಸ್‌ನಿಂದಾಗಿ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಪುಷ್ಟಿ ಸಿಗಲಿದೆ. ಶಸ್ತ್ರಾಸ್ತ್ರಗಳ ಆಮದು ವೆಚ್ಚ ಇಳಿಕೆಯಾಗಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಕೂಡ ಪ್ರಯೋಜನಕಾರಿಯಾಗಲಿದೆ.

ರಕ್ಷಣಾ ಸಚಿವಾಲಯವು 11 ಗಸ್ತು ನೌಕೆಗಳನ್ನು ಹಾಗೂ 6 ಕ್ಷಿಪಣಿ ವಾಹಕ ನೌಕೆಗಳನ್ನು ಖರೀದಿಸಲು ಕೂಡ 19,600 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿದೆ. ಸುಧಾರಿತ ಆಕಾಶ್‌ ವೆಪ್ಪನ್‌ ಸಿಸ್ಟಮ್‌, 12 ವೆಪ್ಪನ್‌ ಲೊಕೇಟಿಂಗ್‌ ರಾಡಾರ್‌ಗಳನ್ನೂ ಖರೀದಿಸಲು 9,100 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರ ದೇಶದಲ್ಲಿಯೇ ಶಸ್ತ್ರಾಸ್ತ್ರ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಲಡಾಕ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ಜತೆಗಿನ ಸಂಘರ್ಷ ನಡೆದು ಮೂರು ವರ್ಷಗಳ ಬಳಿಕ, ಹೊಸತಾಗಿ ಭಾರತ ಶಸ್ತ್ರಾಸ್ತ್ರ ಖರೀದಿಗೆ ಮೆಗಾ ಒಪ್ಪಂದವನ್ನು ಮಾಡಿಕೊಂಡಿದೆ.

ದೇಶದ ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರತೆ ಸಾಧಿಸಲು ಕೇಂದ್ರ ಸರ್ಕಾರವು ಮೇಕ್‌ ಇನ್‌ ಇಂಡಿಯಾಗೆ (Make In India) ಒತ್ತು ನೀಡುತ್ತಿರುವ ಕಾರಣ ಭಾರತದ ಯುದ್ಧವಿಮಾನ, ಶಸ್ತ್ರಾಸ್ತ್ರಗಳಿಗೆ ಬೇರೆ ದೇಶಗಳಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇದೇ ಕಾರಣದಿಂದಾಗಿ ಕಳೆದ ಐದು ವರ್ಷದಲ್ಲಿ ರಕ್ಷಣಾ ರಫ್ತು ಶೇ.339ರಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ದೇಶೀಯ ಎಲ್‌ಸಿಎ ತೇಜಸ್‌ ಎಂಕೆ2 (Tejas Mk2) ಯುದ್ಧವಿಮಾನಗಳ ಖರೀದಿಗೆ 16 ದೇಶಗಳು ಆಸಕ್ತಿ ತೋರಿವೆ. ಇದಕ್ಕಾಗಿ ಉತ್ಪಾದನೆ ಕ್ಷಿಪ್ರಗೊಳಿಸಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ

Exit mobile version