ನವದೆಹಲಿ: ಎಲ್ಲೆಂದರಲ್ಲಿ ಬೇಕಾಬಿಟ್ಟಿ ನಿಲ್ಲಿಸಿದ ವಾಹನಗಳ ಫೊಟೊ ತೆಗೆದು ಸಾರಿಗೆ ಇಲಾಖೆಗೆ ಕಳಿಸಿದರೆ 500 ರೂ. ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ತಪ್ಪಾಗಿ ವಾಹನವನ್ನು ಪಾರ್ಕಿಂಗ್ ಮಾಡಿದ್ದರೆ 1,000 ರೂ. ದಂಡ ವಿಧಿಸಲಾಗುತ್ತದೆ. ಅದರಲ್ಲಿ 500 ರೂ. ಫೊಟೊ ತೆಗೆದವರಿಗೆ ನೀಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಅವರು ದಿಲ್ಲಿಯ ಹೋಟೆಲ್ ಒಂದರಲ್ಲಿ ನಡೆದ ಸಮಾವೇಶವೊಂದರಲ್ಲಿ ಹೇಳಿದ್ದಾರೆ.
ಸಚಿವರ ಹೇಳಿಕೆ ಕಾನೂನಾಗಿ ಜಾರಿಯಾಗಲಿದೆಯೇ, ಪ್ರಸ್ತಾಪದ ಹಂತದಲ್ಲಿ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಜನತೆಗೆ ತೊಂದರೆಯಾಗುತ್ತದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಸಮಸ್ಯೆಯಾಗುತ್ತದೆ. ಇದನ್ನು ತಡೆಯಲು ಮಾರ್ಗೋಪಾಯ ಕಂಡುಕೊಳ್ಳಲಾಗುತ್ತಿದೆ.
ನಗರಗಳಲ್ಲಿ ಕುಟುಂಬದ ಪ್ರತಿ ಸದಸ್ಯರೂ ಕಾರು ತೆಗೆದುಕೊಳ್ಳುವ ಟ್ರೆಂಡ್ ಹೆಚ್ಚುತ್ತಿದೆ. ಆದರೆ ಮನೆಯಲ್ಲಿ ಎಲ್ಲ ಕಾರುಗಳನ್ನು ನಿಲ್ಲಿಸಲು ಜಾಗ ಇರುವುದಿಲ್ಲ. ಆಗ ರಸ್ತೆ ಬದಿಯಲ್ಲಿ ನಿಲ್ಲಿಸುತ್ತಾರೆ. ಉದಾಹರಣೆಗೆ ದಿಲ್ಲಿಯಲ್ಲಿ ವಿಶಾಲವಾದ ರಸ್ತೆಗಳು ಅಕ್ರಮವಾಗಿ ಪಾರ್ಕಿಂಗ್ ತಾಣಗಳಾಗಿ ಬದಲಾಗಿವೆ ಎಂದು ಗಡ್ಕರಿ ವಿವರಿಸಿದರು.
” ನಾಗ್ಪುರದಲ್ಲಿ ನನ್ನ ಮನೆಯಲ್ಲಿ 12 ಕಾರು ನಿಲ್ಲಿಸಲು ಸ್ಥಳ ಇದೆ. ಹೀಗಾಗಿ ಕಾರನ್ನು ರಸ್ತೆಯಲ್ಲಿ ನಿಲ್ಲಿಸುವ ಪ್ರಶ್ನೆ ಇಲ್ಲ ʼ ಎಂದರು.