ಮುಂಬಯಿ: ಮುಂಬಯಿನಲ್ಲಿ ಮತ್ತೊಂದು ಆನ್‌ಲೈನ್ ಬ್ಯಾಂಕಿಂಗ್ ವಂಚನೆಯಲ್ಲಿ 26 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ 7.5 ಲಕ್ಷ ರೂ. ನಷ್ಟವಾಗಿದೆ. ಆನ್‌ಲೈನ್ ಹಣಕಾಸು ವರ್ಗಾವಣೆಗೆ (Online Banking Fraud) ಸಹಕರಿಸುವ ನೆಪದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಮಲಾಡ್ ಶಾಖೆಯ ಉದ್ಯೋಗಿ ದಿನೇಶ್ ಬೈಸಾನೆ ಎಂಬಾತ ವಂಚಿಸಿರುವ ಆರೋಪ ಎದುರಿಸುತ್ತಿದ್ದಾನೆ. ಆ ಶಾಖೆಯಲ್ಲಿ ಮಹಿಳೆಯ ಬ್ಯಾಂಕ್ ಖಾತೆ ಇತ್ತು.
ಬ್ಯಾಂಕ್ ಉದ್ಯೋಗಿ ದಿನೇಶ್, ಜಾನಕಿ ಚೌಬೆ ಎಂಬ ಮಹಿಳೆಗೆ ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಅನ್ನು ಪರಿಚಯಿಸಿದ್ದರು. ಜತೆಗೆ ಆಕೆಯ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅನ್ನು ತಿಳಿದುಕೊಂಡಿದ್ದರು. ಜಾನಕಿ ಅವರು ಆಗಾಗ್ಗೆ ಪೇಮೆಂಟ್ ಸ್ಲಿಪ್ ಅನ್ನು ಸರಿಯಾಗಿ ಭರ್ತಿ ಮಾಡಿಕೊಡುವಂತೆ ಉದ್ಯೋಗಿ ಬಳಿ ಕೋರಿದ್ದರು. ಇದಕ್ಕೆ ಆತನೂ ಸಹಕರಿಸುತ್ತಿದ್ದ. ಪ್ರತಿ ಸಲ ಆಕೆ ಬ್ಯಾಂಕಿಗೆ ಹಣಕಾಸು ವರ್ಗಾವಣೆಗೆ ಬಂದಾಗ ಆತ ಆಕೆಯ ಮೊಬೈಲ್ ಅನ್ನು ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ. ಒಟಿಪಿ ಬಂದಾಗ ನೋಡಲು ಬೇಕಾಗುತ್ತದೆ ಎಂದು ಹೇಳುತ್ತಿದ್ದ. ಆದರೆ ಕಳೆದ ವರ್ಷ ಡಿಸೆಂಬರ್ 26ರಂದು ಆಕೆ ತನ್ನ ಸ್ನೇಹಿತೆಯ ಜತೆಗೆ ಹೋಗಿದ್ದಾಗ ಇದು ಸರಿಯಲ್ಲ ಎಂಬುದು ಅರಿವಾಯಿತು. ಆಗ ಆಕೆಯ ಪತಿಯ ಖಾತೆಯಲ್ಲಿ 12 ಲಕ್ಷ ರೂ. ಇರಬೇಕಿದ್ದಲ್ಲಿ ಕೇವಲ 5 ಲಕ್ಷ ರೂ. ಮಾತ್ರ ಇದ್ದುದು ಗೊತ್ತಾಯಿತು. ಈ ಬಗ್ಗೆ ದಿನೇಶ್ ಬಳಿ ಕೇಳಿದಾಗ, ಪಾಸ್‌ಬುಕ್ ಪ್ರಿಂಟಿಂಗ್ ಮೆಶೀನ್‌ನ ಸಮಸ್ಯೆ ಇರಬೇಕು ಎಂದು ಸಮಜಾಯಿಷಿ ನೀಡಿದ್ದ.
ಕೆಲ ದಿನಗಳ ಬಳಿಕ ಮತ್ತೆ ಕೇಳಿದಾಗ, 12,26,259 ರೂ. ಬ್ಯಾಲೆನ್ಸ್ ಇರುವ ಸ್ಟೇಟ್ ಮೆಂಟ್ ನೀಡಿದ್ದ. ಆದರೆ ಅದನ್ನು ತನ್ನ ಪಾಸ್‌ಬುಕ್‌ನ ಸ್ಟೇಟ್ ಮೆಂಟ್ ಜತೆ ಹೋಲಿಸಿದಾಗ ವ್ಯತ್ಯಾಸಗಳು ಕಂಡು ಬಂದಿತ್ತು. ಆಗ ಬ್ಯಾಂಕ್ ಮ್ಯಾನೇಜರ್ ಬಳಿ ವಿಚಾರಿಸಿದಾಗ ಒರಿಜಿನಲ್ ಸ್ಟೇಟ್ ಮೆಂಟ್ ಪರಿಶೀಲಿಸಲಾಯಿತು. ಆಗ 12 ಸಲ ಅಕ್ರಮವಾಗಿ ಒಟ್ಟು 7,63,196 ರೂ. ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ.