ನವ ದೆಹಲಿ: ರಕ್ಷಣಾ ಸಚಿವಾಲಯವು ಸಶಸ್ತ್ರ ಸೇನಾಪಡೆಗೆ (ATAGS to BrahMos) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಪೂರೈಸಲು, 70,500 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಒಪ್ಪಂದವನ್ನು ಗುರುವಾರ ಅಂತಿಮಗೊಳಿಸಿದೆ. ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರ ದೇಶದಲ್ಲಿಯೇ ಶಸ್ತ್ರಾಸ್ತ್ರ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ.
ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಜತೆಗಿನ ಸಂಘರ್ಷ ನಡೆದು ಮೂರು ವರ್ಷಗಳ ಬಳಿಕ, ಹೊಸತಾಗಿ ಭಾರತ ಶಸ್ತ್ರಾಸ್ತ್ರ ಖರೀದಿಗೆ ಮೆಗಾ ಒಪ್ಪಂದವನ್ನು ಮಾಡಿಕೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸಭೆ ನಡೆದಿದ್ದು, ವಿವರಗಳನ್ನು ನೀಡಿದೆ.
307 ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ಸ್̧ ಸ್ವದೇಶಿ 155 ಎಂಎಂ/52 ಕ್ಯಾಲಿಬರ್ ATAGS ಅನ್ನು ಡಿಆರ್‌ಡಿಒ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ನೌಕಾ ಪಡೆಯ ಯುದ್ಧ ನೌಕೆಗಳಿಗೋಸ್ಕರ 200 ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಕೂಡ ಒಪ್ಪಂದವನ್ನು ಅಂತಿಮಪಡಿಸಲಾಗಿದೆ. ಇದಲ್ಲದೆ 4 ಪ್ರಾಜೆಕ್ಟ್-15 ಬಿ ಡಿಸ್ಟ್ರಾಯರ್ಸ್, 17ಎ ಫ್ರಿಗೇಟ್ಸ್, ಶಕ್ತಿ ಇಡಬ್ಲ್ಯು ಸಿಸ್ಟಮ್ಸ್, ಯುಟಿಲಿಟಿ ಹೆಲಿಕಾಪ್ಟರ್ಸ್ ಅನ್ನು ಖರೀದಿಸಲಾಗುತ್ತಿದೆ. 2022-23ರ ಸಾಲಿಗೆ ಒಟ್ಟು 2,71,538 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿಯ ಯೋಜನೆಗಳಿವೆ. ಇದರಲ್ಲಿ 98.9% ರಷ್ಟನ್ನು ದೇಶೀಯ ಮೂಲಗಳಿಂದ ಖರೀದಿಸಲಾಗುತ್ತಿದೆ.