ಹೊಸದಿಲ್ಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಟಿ.ವಿ, ರೆಫ್ರಿಜರೇಟರ್, ವಾಷಿಂಗ್‌ಮೆಷೀನ್, ಏಸಿ ಸೇರಿದಂತೆ ನಾನಾ ಗೃಹ ಬಳಕೆಯ ಸಾಧನಗಳ ದರಗಳು ಶೇ.3ರಿಂದ 5ರ ತನಕ ಏರಿಕೆಯಾಗಲಿದೆ.
ಕನ್‌ಸ್ಯೂಮರ್ ಎಲೆಕ್ಟ್ರಾನಿಕ್ಸ್ ಆಂಡ್ ಅಪ್ಲೈಯನ್ಸ್ ಮಾನ್ಯುಫಾಕ್ಚರರ್ಸ್ ಅಸೋಸಿಯೇಶನ್ (CEAMA) ಪ್ರಕಾರ ಮೇ ಅಂತ್ಯ ಅಥವಾ ಜೂನ್ ಮೊದಲ ವಾರ ದರ ಏರಿಕೆ ಜಾರಿಯಾಗುವ ನಿರೀಕ್ಷೆ ಇದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ರೂಪಾಯಿ ಮೌಲ್ಯ ಕುಸಿತ ಎಫೆಕ್ಟ್
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಮತ್ತು ಬಿಡಿಭಾಗಗಳ ಆಮದು ದುಬಾರಿಯಾಗಿ ಪರಿಣಮಿಸಿದೆ. ಕಚ್ಚಾ ಸಾಮಾಗ್ರಿಗಳಿಗೆ ಆಮದನ್ನು ಉದ್ದಿಮೆ ಬಹುವಾಗಿ ಅವಲಂಬಿಸಿದೆ. ಕೋವಿಡ್-೧೯ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಶಾಂಘೈನಲ್ಲಿ ಕಠಿಣ ಲಾಕ್ ಡೌನ್ ಜಾರಿಯಲ್ಲಿದೆ. ಇದು ಕೂಡ ಕಚ್ಚಾ ಸಾಮಾಗ್ರಿಗಳ ಆಮದಿಗೆ ಸವಾಲಾಗಿ ಪರಿಣಮಿಸಿದೆ.
” ಕಚ್ಚಾ ವಸ್ತುಗಳ ದರ ಈಗಾಗಲೇ ಏರಿಕೆಯಾಗಿದೆ. ಇದೀಗ ಡಾಲರ್ ಮೌಲ್ಯ ಏರುಗತಿಯಲ್ಲಿದ್ದು, ರೂಪಾಯಿ ಮೌಲ್ಯ ಕುಸಿಯುತ್ತಿದೆ. ಹೀಗಾಗಿ ಜೂನ್ ಬಳಿಕ ಶೇ.3ರಿಂದ ಶೇ.5ರ ತನಕ ಏರಿಕೆಯಾಗಲಿದೆʼʼ ಎಂದು ಸಿಇಎಎಂಎ ಅಧ್ಯಕ್ಷ ಎರಿಕ್ ಬ್ರಾಗ್ನಾಜ್ ತಿಳಿಸಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯ 77.40ರ ಮಟ್ಟದಲ್ಲೇ ಮುಂದುವರಿದರೆ ದರ ಪರಿಷ್ಕರಣೆ ಅನಿವಾರ್ಯವಾಗಲಿದೆ ಎಂದು ಉತ್ಪಾದಕರು ತಿಳಿಸಿದ್ದಾರೆ.
ದರ ಹೆಚ್ಚಳಕ್ಕೆ ಒತ್ತಡವಿದ್ದರೂ, ಗ್ರಾಹಕರಿಗೆ ಹೊರೆಯಾಗದಂತೆ ಏರಿಸಲಾಗುವುದು ಎಂದು ಪ್ಯಾನಸಾನಿಕ್ ಇಂಡಿಯಾದ ಸೌತ್ ಏಷ್ಯಾ ಸಿಇಒ ಮನೀಶ್ ಶರ್ಮಾ ತಿಳಿಸಿದ್ದಾರೆ.