ನವ ದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೊಟ್ಟ ಮೊದಲ ಬಾರಿಗೆ 81 ರೂ.ಗೆ ಶುಕ್ರವಾರ (Rupee @81) ಕುಸಿದಿದೆ.
ಕಾರಣವೇನು?: ಕಳೆದ ಫೆಬ್ರವರಿಯಿಂದೀಚೆಗೆ ರೂಪಾಯಿ ಕುಸಿತಕ್ಕೀಡಾಗುತ್ತಿದ್ದು, ಇದೀಗ ಸಾರ್ವಕಾಲಿಕ ಇಳಿಕೆ ದಾಖಲಿಸಿದೆ. ಅಮೆರಿಕದಲ್ಲಿ ಡಾಲರ್ ಇಂಡೆಕ್ಸ್ ೧೧೧ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉನ್ನತ ಮಟ್ಟಕ್ಕೆ ಏರಿಕೆಯಾಗಿದೆ. ಅಮೆರಿಕ ಬಾಂಡ್‌ನ ಆದಾಯ 4.1%ಕ್ಕೆ ಹೆಚ್ಚಳವಾಗಿದೆ. ಇದು ರೂಪಾಯಿ ಸೇರಿದಂತೆ ಇತರ ಕರೆನ್ಸಿಗಳ ಮೌಲ್ಯ ಪತನಕ್ಕೆ ಕಾರಣವಾಗಿದೆ.
10 ವರ್ಷಗಳ ಅಮೆರಿಕ ಬಾಂಡ್‌ನ ಆದಾಯ 3.70%ಕ್ಕೆ ಏರಿದ್ದರೆ, ಎರಡು ವರ್ಷಗಳ ಅವಧಿಯ ಬಾಂಡ್ ಆದಾಯ 4.16% ಕ್ಕೆ ಏರಿದೆ. ಗುರುವಾರ ಒಂದೇ ದಿನ ರೂಪಾಯಿ 83 ಪೈಸೆ ಇಳಿದಿತ್ತು. ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು 0.75%ರಷ್ಟು ಏರಿಸಿರುವುದರಿಂದ ಒಟ್ಟು ಬಡ್ಡುಇ ದರ 3.25%ಕ್ಕೆ ಹೆಚ್ಚಳವಾಗಿದೆ. ಇನ್ನೂ ಏರಿಕೆಯ ಸಾಧ್ಯತೆ ಇದೆ. ಇದು ಕೂಡ ಡಾಲರ್ ಪ್ರಾಬಲ್ಯ ಮತ್ತು ರೂಪಾಯಿ ಮೌಲ್ಯ ಪತನಕ್ಕೆ ಕಾರಣವಾಗಿದೆ.
2014ರಲ್ಲಿ | 60.99 ರೂ. |
2015 | 64.13 |
2016 | 67.17 |
2017 | 65.09 |
2018 | 68.41 |
2019 | 70.40 |
2020 | 74.10 |
2021 | 73.93 |
2022 | 81.00 ( ಸೆಪ್ಟೆಂಬರ್) |
ರೂಪಾಯಿ ಕುಸಿತದಿಂದ ಬೆಲೆ ಏರಿಕೆ
ಡಾಲರ್ ಎದುರು ರೂಪಾಯಿಯ ಕುಸಿತದಿಂದ ಉಂಟಾಗುವ ಅತಿ ದೊಡ್ಡ ಅನಾನುಕೂಲ ಏನು ಎಂದರೆ ಆಮದು ವೆಚ್ಚ ದುಬಾರಿಯಾಗುತ್ತದೆ. ಮುಖ್ಯವಾಗಿ ಕಚ್ಚಾ ತೈಲ, ಬಂಗಾರ, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಇತರ ಉತ್ಪನ್ನಗಳ ಆಮದು ದುಬಾರಿಯಾಗುತ್ತದೆ. ಬೆಲೆ ಏರಿಕೆ ಅಥವಾ ಹಣದುಬ್ಬರ ಉಂಟಾಗುತ್ತದೆ. ಈಗಾಗಲೇ ಆರ್‌ಬಿಐನ ಸುರಕ್ಷತಾ ಮಟ್ಟವನ್ನು ಹಣದುಬ್ಬರ ಮೀರಿದೆ.
ರೂಪಾಯಿ ಕುಸಿತದ ಪರಿಣಾಮ ಆಮದು ವೆಚ್ಚ ಹೆಚ್ಚುವುದರಿಂದ ಡೀಸೆಲ್, ಪೆಟ್ರೋಲ್, ಎಲ್ಪಿಜಿ ದರದಲ್ಲಿ ಮತ್ತಷ್ಟು ಹೆಚ್ಚಳವಾದರೆ ಅಚ್ಚರಿ ಇಲ್ಲ. ಇದು ಜನರ ದೈನಂದಿನ ವೆಚ್ಚಗಳನ್ನು ಏರಿಸುತ್ತದೆ. ಸಾರಿಗೆ ವೆಚ್ಚ ಏರುತ್ತದೆ.
ರಫ್ತುದಾರರಿಗೆ ಅನುಕೂಲ:
ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಸಾಫ್ಟ್‌ವೇರ್ ಕಂಪನಿಗಳಿಗೆ ಆದಾಯ ಹೆಚ್ಚುತ್ತದೆ. ಅವುಗಳು ಡಾಲರ್‌ನಲ್ಲಿ ಗಳಿಸುವ ಆದಾಯವನ್ನು ರೂಪಾಯಿಗೆ ಪರಿವರ್ತಿಸಿದಾಗ ಮೊತ್ತ ಹೆಚ್ಚುತ್ತದೆ.
ಸೌರಶಕ್ತಿ ಮತ್ತು ಪವನ ಶಕ್ತಿಯನ್ನು ಆಧರಿಸಿದ ಉದ್ಯಮಗಳು ತಮ್ಮ ಯಂತ್ರೋಪಕರಣಗಳಿಗೆ ಆಮದನ್ನೇ ಹೆಚ್ಚು ಅವಲಂಬಿಸಿವೆ. ಹೀಗಾಗಿ ಅವುಗಳಿಗೆ ವೆಚ್ಚ ಏರಿಕೆಯಾಗಲಿದೆ.
ವಿದೇಶಗಳಲ್ಲಿ ಶಿಕ್ಷಣ, ಪ್ರವಾಸ ತುಟ್ಟಿ: ರೂಪಾಯಿ ಮೌಲ್ಯ ಕುಸಿತದಿಂದಾಗಿ ವಿದೇಶಗಳಲ್ಲಿ ಶಿಕ್ಷಣ ಮತ್ತು ವಿದೇಶ ಪ್ರವಾಸದ ವೆಚ್ಚ ಹೆಚ್ಚುತ್ತದೆ.
ಇತರ ಕರೆನ್ಸಿಗಳು ರೂಪಾಯಿಗಿಂತಲೂ ದುರ್ಬಲ
ಡಾಲರ್ ಎದುರು ರೂಪಾಯಿ ೮೦ ರೂ.ಗೆ ಕುಸಿದಿದ್ದರೂ, ಈ ವರ್ಷ ಬ್ರಿಟನ್‌ನ ಪೌಂಡ್, ಜಪಾನಿನ ಯೆನ್, ಯುರೋಪಿನ ಯೂರೊ ಇತ್ಯಾದಿ ಕರೆನ್ಸಿಗಳು ರೂಪಾಯಿಗಿಂತಲೂ ಹೆಚ್ಚು ಕುಸಿದಿವೆ ಎನ್ನುತ್ತಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಒಟ್ಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಭಾರತಕ್ಕೆ ಹಲವು ಕಠಿಣ ಸವಾಲುಗಳು ಉಂಟಾಗಿರುವುದು ಹಾಗೂ ಮುಖ್ಯವಾಗಿ ಬೆಲೆ ಏರಿಕೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿರುವುದು ವಾಸ್ತವ.
ಡಾಲರ್‌ಗೆ ಪರ್ಯಾಯವಾಗಿ ರುಪಾಯಿಯಲ್ಲೇ ಅಮದು-ರಫ್ತು ವ್ಯವಹಾರ ಸಾಧ್ಯವೇ?
ಆರ್‌ಬಿಐ ಇತ್ತೀಚೆಗೆ ಡಾಲರ್ ಬದಲಿಗೆ ರೂಪಾಯಿಯಲ್ಲಿಯೇ ಆಮದು-ರಫ್ತು ಕುರಿತ ಹಣಕಾಸು ಪಾವತಿಗಳನ್ನು (ಪೇಮೆಂಟ್, ಇನ್‌ವಾಯ್ಸಿಂಗ್, ಸೆಟ್ಲ್‌ಮೆಂಟ್) ಮಾಡಲು ಅವಕಾಶ ಕಲ್ಪಿಸಿದೆ. ಮತ್ತೊಂದು ಕಡೆ ರಷ್ಯಾ ಕೂಡ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಪರಿಣಾಮ ಭಾರತಕ್ಕೆ ಕಚ್ಚಾ ತೈಲವನ್ನು ರಫ್ತು ಮಾಡುವಾಗ ರೂಪಾಯಿಯಲ್ಲಿಯೇ ಪೇಮೆಂಟ್ ಸ್ವೀಕರಿಸಲು ಸಮ್ಮತಿಸಿದೆ. ಕೆಲ ವರ್ಷಗಳ ಹಿಂದೆ ಇರಾನ್ ಕೂಡ ರೂಪಾಯಿ ಪೇಮೆಂಟ್‌ಗೆ ಒಪ್ಪಿಕೊಂಡು ಕಚ್ಚಾ ತೈಲವನ್ನು ರಫ್ತು ಮಾಡಿತ್ತು. ಆದರೆ ರಷ್ಯಾ ಮತ್ತು ಇರಾನ್ ಎರಡೂ ದೇಶಗಳು ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಒತ್ತಡದಿಂದ ರೂಪಾಯಿಯಲ್ಲಿ ಪೇಮೆಂಟ್ ಸ್ವೀಕರಿಸಲು ಒಪ್ಪಿವೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ದೇಶಗಳು ಭಾರತದ ರೂಪಾಯಿಯನ್ನು ವ್ಯವಹಾರಗಳಲ್ಲಿ ಸರಾಗವಾಗಿ ಬಳಸಿಕೊಳ್ಳಲು ಆರಂಭಿಸಬೇಕು. ಆಗ ರೂಪಾಯಿ ಜಾಗತಿಕ ಕರೆನ್ಸಿಯಾಗಿ ಹೊರಹೊಮ್ಮಬಹುದು. ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಗಣನೀಯವಾಗಿ ವೃದ್ಧಿಸಬಹುದು ಎನ್ನುತ್ತಾರೆ ತಜ್ಞರು. ಇತ್ತೀಚೆಗೆ ಸೌದಿ ಅರೇಬಿಯಾದ ಜತೆಗೂ ಸ್ಥಳೀಯ ಕರೆನ್ಸಿಗಳ ಮೂಲಕ ವ್ಯವಹರಿಸಲು ಚರ್ಚಿಸಲಾಗಿದೆ.