ನವ ದೆಹಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂಬ ಕಳವಳದ ನಡುವೆಯೇ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೂಪಾಯಿ ಮೌಲ್ಯ ಕುಸಿತಕ್ಕೀಡಾಗಿಲ್ಲ, ವಾಸ್ತವವಾಗಿ ಕರೆನ್ಸಿ ತನ್ನ ಸಹಜ ಲಯವನ್ನು ಕಂಡುಕೊಳ್ಳುತ್ತಿದೆ ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
” ರಿಸರ್ವ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯ ಚಲನವಲನದ ಮೇಲೆ ಸತತ ನಿಗಾ ವಹಿಸುತ್ತಿದೆ. ಆದರೆ ಅಗತ್ಯ ಇದ್ದರೆ ಮಾತ್ರ ಮಧ್ಯಪ್ರವೇಶಿಸುತ್ತಿದೆ. ರೂಪಾಯಿಯ ಮೌಲ್ಯವನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿ ಆರ್‌ಬಿಐ ಮೇಲೆ ಯಾವುದೇ ಒತ್ತಡ ಇರುವುದಿಲ್ಲ. ಅದು ತನ್ನ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆʼʼ ಎಂದು ಸಚಿವರು ರಾಜ್ಯಸಭೆಗೆ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.
ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿತವನ್ನು ನಿಯಂತ್ರಿಸಲು ಮಾತ್ರ ಆರ್‌ಬಿಐ ಮಧ್ಯಪ್ರವೇಶಿಸುತ್ತಿರುವುದು ಹೌದು. ಆದರೆ ಉಳಿದಂತೆ ಹಸ್ತಕ್ಷೇಪ ಮಾಡುತ್ತಿಲ್ಲ. ಹೀಗಾಗಿ ರೂಪಾಯಿಗೆ ತನ್ನ ಸಹಜ ಸ್ಥಿತಿಗೆ ಬರಲು ಸಾಧ್ಯವಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಭಾರತವು ಇತರ ಹಲವು ರಾಷ್ಟ್ರಗಳಂತೆ ರೂಪಾಯಿಯನ್ನು ನಿರ್ದಿಷ್ಟ ಮೌಲ್ಯದಲ್ಲಿ ಹಿಡಿದಿಟ್ಟುಕೊಳ್ಳಲು ಯತ್ನಿಸುವುದಿಲ್ಲ. ರೂಪಾಯಿ ತಾನಾಗಿಯೇ ಬಲ ವೃದ್ಧಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇತರ ಡಾಲರ್ ಎದುರು ಹಲವು ಕರೆನ್ಸಿಗಳಿಗಿಂತ ರೂಪಾಯಿಯೇ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ವಿದೇಶಿ ವಿನಿಮಯ ಸಂಗ್ರಹದಲ್ಲಿ ಇಳಿಕೆಯಾಗಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ” ಈಗಲೂ ನಾವು ೫೦೦ ಶತಕೋಟಿ ಡಾಲರ್ ಆಸುಪಾಸಿನಲ್ಲಿ (ಅಂದಾಜು ೪೦ ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದ್ದೇವೆ. ಜುಲೈ ೨೨ರ ವೇಳೆಗೆ ೫೭೧.೫೬ ಶತಕೋಟಿ ಡಾಲರ್‌ನಷ್ಟು ವಿದೇಶಿ ವಿನಿಮಯ ಸಂಗ್ರಹ ಇತ್ತು. ಇದೇನು ಸಣ್ಣ ಮೊತ್ತವಲ್ಲ, ಭಾರತ ಸುಸ್ಥಿತಿಯಲ್ಲಿದೆʼʼ ಎಂದರು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರ ರೂಪಾಯಿ ಮೌಲ್ಯ ೭೮.೫೭ ರೂ.ನಷ್ಟಿತ್ತು.