ನವ ದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಅಬ್ಬರಕ್ಕೆ ರೂಪಾಯಿ ತತ್ತರಿಸಿದ್ದು, ಸತತ ೬ ದಿನಗಳಿಂದ ಕುಸಿದಿದೆ. ಶುಕ್ರವಾರ ಮಧ್ಯಂತರ ವಹಿವಾಟಿನಲ್ಲಿ ಮತ್ತೊಂದು ದಾಖಲೆಯ ೭೯.೯೨ಕ್ಕೆ ಪತನವಾಯಿತು. ಅಂತಿಮವಾಗಿ ದಿನದ ಅಂತ್ಯಕ್ಕೆ ೭೯.೮೭ಕ್ಕೆ ಸ್ಥಿರವಾಯಿತು. ಗುರುವಾರ ಮಧ್ಯಂತರದಲ್ಲಿ ರೂಪಾಯಿ ೮೦.೧೮ ರೂ. ತನಕ ಕುಸಿದಿತ್ತು.
ಡಾಲರ್ ಎದುರು ರೂಪಾಯಿ ಶೀಘ್ರದಲ್ಲಿ ೮೨-೮೩ ರೂ. ತನಕ ಕುಸಿಯುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವರ್ಷ ಡಾಲರ್ ಎದುರು ರೂಪಾಯಿ ೭% ಕುಸಿದಿದೆ.
ರೂಪಾಯಿಯ ದಾಖಲೆ ಕುಸಿತ ಏಕೆ?
ಕಳೆದ ೫-೬ ದಿನಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಮತ್ತು ಈಕ್ವಿಟಿ ಮಾರುಕಟ್ಟೆಯಿಂದ ನಿರಂತರವಾಗಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಡಾಲರ್‌ನಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಇದರ ಪರಿಣಾಮವಾಗಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ.
ಈ ವರ್ಷದ ಆರಂಭದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ೭೪ ರೂ. ಮಟ್ಟದಲ್ಲಿತ್ತು. ಆದರೆ ರಷ್ಯಾ-ಉಕ್ರೇನ್ ಸಂಘರ್ಷ, ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಕಚ್ಚಾ ತೈಲ ದರ ಹೆಚ್ಚಳದಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಕಳೆದ ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಬಳಿಕ ರೂಪಾಯಿ ಕುಸಿತ ತೀವ್ರವಾಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವರ್ಷ ಭಾರತೀಯ ಈಕ್ವಿಟಿ ಮಾರುಕಟ್ಟೆಯಿಂದ ೩೦ ಶತಕೋಟಿ ಡಾಲರ್ (ಅಂದಾಜು ೨.೪೩ ಲಕ್ಷ ಕೋಟಿ ರೂ.) ಮೌಲ್ಯದ ಈಕ್ವಿಟಿ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.
ಸುರಕ್ಷಿತ ಹೂಡಿಕೆಯಾಗಿ ಡಾಲರ್ ಆಕರ್ಷಣೆ
ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಡಾಲರ್ ಅನ್ನು ಆಯ್ಕೆ ಮಾಡುತ್ತಿದ್ದಾರೆ. ಇದು ರೂಪಾಯಿ ಸೇರಿದಂತೆ ಇತರ ಕರೆನ್ಸಿಗಳ ಮೌಲ್ಯ ಕುಸಿಯುವಂತೆ ಮಾಡಿದೆ.
ಅಮೆರಿಕದ ಬಾಂಡ್‌ಗಳಲ್ಲಿ ಹೂಡಿಕೆಗೆ ಭಾರತೀಯ ಬಾಂಡ್‌ಗಳಲ್ಲಿ ಸಿಗುವುದಕ್ಕಿಂತ ಹೆಚ್ಚು ಬಡ್ಡಿ ಆದಾಯ ಸಿಗುತ್ತಿದೆ. ಹೀಗಾಗಿ ಹೂಡಿಕೆದಾರರು ಅಮೆರಿಕದ ಬಾಂಡ್ ಮಾರುಕಟ್ಟೆಯ ಕಡೆಗೆ ಆಕರ್ಷಿತರಾಗಿದ್ದಾರೆ.
ಅಮೆರಿಕದಲ್ಲಿ ಬಡ್ಡಿ ದರ ಏರಿಕೆ
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಹಣದುಬ್ಬರವನ್ನು ನಿಯಂತ್ರಿಸಲು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ್ಡಿ ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಶೇ.೦.೭೫ರಷ್ಟು ಏರಿಕೆ ಮಾಡಿದರೂ ಅಚ್ಚರಿ ಇಲ್ಲ. ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯ ಟ್ರೆಂಡ್‌ನಿಂದಾಗಿ ಡಾಲರ್ ಮೌಲ್ಯ ಇತರ ಕರೆನ್ಸಿಗಳೆದುರು ವೃದ್ಧಿಸಿದೆ.
ರಫ್ತಿಗಿಂತ ಆಮದು ಹೆಚ್ಚಳದ ಪರಿಣಾಮ
ಆಮದು ವೆಚ್ಚವು ರಫ್ತಿಗಿಂತ ಹೆಚ್ಚಳವಾದಾಗ ಡಾಲರ್‌ಗೆ ಬೇಡಿಕೆ ಹೆಚ್ಚುತ್ತದೆ. ಭಾರತದ ರಫ್ತಿಗಿಂತ ಆಮದು ಹೆಚ್ಚಳವಾದಾಗ, ಡಾಲರ್‌ನ ಅವಶ್ಯತೆಯೂ ಏರಿಕೆಯಾಗುತ್ತದೆ. ಯಾವಾದ ಡಾಲರ್‌ಗೆ ಬೇಡಿಕೆ ಹೆಚ್ಚುವುದೋ, ಆಗ ಅದರ ಬೆಲೆಯೂ ಹೆಚ್ಚುತ್ತದೆ. ರೂಪಾಯಿ ಬಡವಾಗುತ್ತದೆ.