Site icon Vistara News

ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ರಾಷ್ಟ್ರವಾಗಿ ಹೊರಹೊಮ್ಮಿದ ರಷ್ಯಾ

crude oil

ನವದೆಹಲಿ: ಭಾರತಕ್ಕೆ ರಷ್ಯಾದಿಂದ ಕಚ್ಚಾ ತೈಲದ ಆಮದು ಅಭೂತಪೂರ್ವ ಮಟ್ಟದಲ್ಲಿ ಏರಿಕೆಯಾಗಿದೆ.

ಇದುವರೆಗೆ ಸೌದಿ ಅರೇಬಿಯಾ, ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲವನ್ನು ರಫ್ತು ಮಾಡುವ ಎರಡನೇ ರಾಷ್ಟ್ರವಾಗಿತ್ತು. ಆದರೆ ಕಳೆದ ಏಪ್ರಿಲ್‌ನಿಂದ ರಷ್ಯಾ ಎರಡನೇ ಸ್ಥಾನವನ್ನು ಗಳಿಸಿದೆ. ಸೌದಿ ಅರೇಬಿಯಾ ಮೂರನೇ ಸ್ಥಾನಕ್ಕಿಳಿದಿದೆ.

ರಷ್ಯಾದ ತೈಲ ಖರೀದಿದಾರರಲ್ಲಿ ಇದುವರೆಗೂ ಭಾರತ ನಗಣ್ಯವಾಗಿತ್ತು. ಆದರೆ ಇದೀಗ ರಷ್ಯಾದಿಂದ ಸಮುದ್ರ ಮಾರ್ಗದ ಮೂಲಕ ಕಚ್ಚಾ ತೈಲ ಖರೀದಿಸುತ್ತಿರುವ ಎರಡನೇ ಪ್ರಮುಖ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ರಷ್ಯಾ ತೈಲ ಕೊಳ್ಳುವ ಮೊದಲ ಎರಡು ದೇಶಗಳಲ್ಲಿ ಚೀನಾ ಮತ್ತು ಭಾರತ ಮುಂಚೂಣಿಗೆ ಬಂದಿವೆ.

ಭಾರತಕ್ಕೆ ಇರಾಕ್‌ ಅತಿ ಹೆಚ್ಚು ಕಚ್ಚಾ ತೈಲವನ್ನು ಸರಬರಾಜು ಮಾಡುತ್ತಿದೆ. ಇದುವರೆಗೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿತ್ತು. ರಷ್ಯಾ-ಉಕ್ರೇನ್‌ ಸಮರದ ಬಳಿಕ ಈ ಭಾರಿ ಬದಲಾವಣೆ ಸಂಭವಿಸಿದೆ ಎಂದು ಉದ್ಯಮ ವಲಯದ ಅಂಕಿ ಅಂಶಗಳು ತಿಳಿಸಿವೆ.

ಭಾರತದ ರಿಫೈನರಿಗಳು 2.8 ಕೋಟಿ ಬ್ಯಾರೆಲ್‌ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿವೆ. ಈಗ ರಷ್ಯಾದ ಎಲ್ಲ ಬಂದರುಗಳಿಂದ ಭಾರತ ತೈಲವನ್ನು ತರಿಸಿಕೊಳ್ಳುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ ಭಾರತದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇ.5ಕ್ಕೆ ಏರಿತ್ತು. ಇದಕ್ಕೂ ಹಿಂದೆ 2021ರಲ್ಲಿ ಕೇವಲ 1% ಮಾತ್ರ ಇತ್ತು ಎಂಬುದನ್ನಿಲ್ಲಿ ಗಮನಿಸಬಹುದು.

ಭಾರತ ವಿಶ್ವದಲ್ಲಿಯೇ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ಮತ್ತು ಬಳಕೆದಾರ ರಾಷ್ಟ್ರ. ಮೇನಲ್ಲಿ ಇರಾಕ್‌ ಎಂದಿನಂತೆ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸಿದ್ದರೆ, ಎರಡನೇ ಸ್ಥಾನದಲ್ಲಿ ಸೌದಿ ಅರೇಬಿಯಾದ ಬದಲು ರಷ್ಯಾ ಹೊರಹೊಮ್ಮಿದೆ.

ರಷ್ಯಾವು ಭಾರತಕ್ಕೆ ಡಿಸ್ಕೌಂಟ್‌ ದರದಲ್ಲಿ ಕಚ್ಚಾ ತೈಲ ಸರಬರಾಜು ಮಾಡುತ್ತಿರುವುದರಿಂದ ಅನುಕೂಲವಾಗಿದೆ. ಇದುವರೆಗೆ ಚೀನಾ ಮಾತ್ರ ಪೆಸಿಫಿಕ್‌ ಕರಾವಳಿ ವಲಯದ ಬಂದರುಗಳಿಂದ ರಷ್ಯಾ ತೈಲವನ್ನು ಅತಿ ಹೆಚ್ಚು ಖರೀದಿಸುತ್ತಿತ್ತು. ಈಗ ಎರಡನೇ ಸ್ಥಾನದಲ್ಲಿ ಭಾರತ ಇದೆ.

ಜೂನ್‌ ಮೊದಲ ವಾರದಲ್ಲಿ ದಿನಕ್ಕೆ ಸರಾಸರಿ 860,000 ಬ್ಯಾರೆಲ್‌ ಕಚ್ಚಾ ತೈಲ ಏಷ್ಯಾದ ಖರೀದಿದಾರರಿಗೆ ಸರಬರಾಜಾಗಿತ್ತು. ಉಕ್ರೇನ್‌ ವಿರುದ್ಧ ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಯುರೋಪ್‌, ಸಮುದ್ರ ಮಾರ್ಗದ ಮೂಲಕ ರಷ್ಯಾದ ಕಚ್ಚಾ ತೈಲವನ್ನು ಖರೀದಿಸದಿರಲು ನಿರ್ಧರಿಸಿದೆ. ಮುಂಬರುವ ಡಿಸೆಂಬರ್‌ನಿಂದ ಯುರೋಪ್‌ ತನ್ನ ನಿರ್ಬಂಧಗಳ ಆರನೇ ಪ್ಯಾಕೇಜ್‌ ಅಂಗವಾಗಿ ಸಮುದ್ರ ಮಾರ್ಗದ ಮೂಲಕ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ. ಹೀಗಾಗಿ ಭಾರತಕ್ಕೆ ರಫ್ತು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ರಷ್ಯಾ ಡಿಸ್ಕೌಂಟ್‌ ದರದಲ್ಲಿ ತೈಲವನ್ನು ಪೂರೈಸಿದರೆ ಭಾರತಕ್ಕೆ ಕೊಲ್ಲಿ ರಾಷ್ಟ್ರಗಳ ಅವಲಂಬನೆಯನ್ನು ತಗ್ಗಿಸಲು ಸಾಧ್ಯವಾಗಲಿದೆ.

Exit mobile version