ಮಾಸ್ಕೊ: ರಷ್ಯಾ ಸಮುದ್ರ ಮಾರ್ಗದ ಮೂಲಕ ರಫ್ತು ಮಾಡುವ ಮೂರನೇ ಎರಡರಷ್ಟು ( Russian crude oil) ಕಚ್ಚಾ ತೈಲವನ್ನು ಭಾರತ ಮತ್ತು ಚೀನಾ ಖರೀದಿಸುತ್ತಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ತೈಲ ಖರೀದಿಗೆ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಅಲ್ಲಿನ ತೈಲ ಮಾರಾಟವು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿದೆ. ಏಷ್ಯಾದ ಗ್ರಾಹಕರುಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಭಾರತ ಹೊರಹೊಮ್ಮಿದೆ. ಇವೆರಡೇ ದೇಶಗಳು ಈಗ ರಷ್ಯಾದ ತೈಲವನ್ನು ಅತಿ ಹೆಚ್ಚು ಖರೀದಿಸುತ್ತಿವೆ. ಹೀಗಾಗಿ ರಷ್ಯಾ ಜತೆಗೆ ಡಿಸ್ಕೌಂಟ್ ದರದಲ್ಲಿ ತೈಲ ಪಡೆಯುವ ನಿಟ್ಟಿನಲ್ಲಿ ಚೌಕಾಶಿ ಮಾಡಬಲ್ಲ ಸಾಮರ್ಥ್ಯ ಭಾರತ ಮತ್ತು ಚೀನಾಕ್ಕೆ ಲಭಿಸಿದೆ.
ಎಷ್ಟು ಡಿಸ್ಕೌಂಟ್ ಸಿಗುತ್ತದೆ? ಕಳೆದ ವಾರ ರಷ್ಯಾ ತನ್ನ ಉರಲ್ ದರ್ಜೆಯ ಕಚ್ಚಾ ತೈಲವನ್ನು ಪ್ರತಿ ಬ್ಯಾರೆಲ್‌ಗೆ 52 ಡಾಲರ್ ಲೆಕ್ಕದಲ್ಲಿ ರಫ್ತು ಮಾಡಿದೆ. ಅಂದರೆ ಬ್ರೆಂಟ್ ಕಚ್ಚಾ ತೈಲಕ್ಕೆ ಹೋಲಿಸಿದರೆ 33 ಡಾಲರ್ ಅಗ್ಗ ಶೇಕಡಾವಾರು ಲೆಕ್ಕದಲ್ಲಿ 39% ಡಿಸ್ಕೌಂಟ್.
ರಷ್ಯಾ-ಉಕ್ರೇನ್ ಸಂಘರ್ಷದ ಆರಂಭಿಕ ಘಟ್ಟಕ್ಕೆ ಹೋಲಿಸಿದರೆ ಈಗ ಜಾಗತಿಕ ಕಚ್ಚಾ ತೈಲ ದರ ಕೂಡ ಇಳಿಕೆಯಾಗಿದೆ. ಆಗ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಇದ್ದ ದರ ಈಗ 86 ಡಾಲರ್‌ಗೆ ತಗ್ಗಿದೆ.