ನವದೆಹಲಿ: ಭಾರತದ ಸಾರ್ವಜನಿಕ ತೈಲ ಕಂಪನಿಗಳು ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಹರ ಸಾಹಸಪಡುತ್ತಿವೆ. ಆದರೆ ಇದು ಅಷ್ಟು ಸುಲಭವಾಗಿ ಉಳಿದಿಲ್ಲ.
ರಷ್ಯಾದಿಂದ ಭಾರತಕ್ಕೆ ಡಿಸ್ಕೌಂಟ್ ದರದ ಕಚ್ಚಾ ತೈಲ ಅಂದುಕೊಂಡಷ್ಟು ಸುಲಭಕ್ಕೆ ಸಿಕ್ಕರೆ, ಕೊಲ್ಲಿ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ತಪ್ಪಿಸಬಹುದಿತ್ತು. ಆದರೆ ಇತ್ತೀಚೆಗೆ ಭಾರತದ ಎರಡು ಪ್ರಮುಖ ತೈಲ ಕಂಪನಿಗಳಿಗೆ ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲ ಲಭಿಸಿಲ್ಲ.
ರಷ್ಯಾದ ಪ್ರಮಖ ತೈಲ ಕಂಪನಿಯಾದ ರೋಸ್‌ನೆಫ್ಟ್ ಜತೆ ರಿಯಾಯಿತಿ ದರದಲ್ಲಿ ಹೆಚ್ಚುವರಿ ತೈಲ ಖರೀದಿಸಲು ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಆರ್ಡರ ಸಲ್ಲಿಸಿತ್ತು. ಆದರೆ ಹೊಸ ಡೀಲ್ ಕುದುರಿಲ್ಲ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ ಮಾತ್ರ ಅಗ್ಗದ ದರದಲ್ಲಿ ಹೆಚ್ಚುವರಿ ತೈಲ ಖರೀದಿ ಸಾಧ್ಯವಾಗಿದೆ. ಇತರ ಎರಡು ಕಂಪನಿಗಳ ಪ್ರಸ್ತಾಪವನ್ನು ರೋಸ್ ನೆಫ್ಟ್ ನಿರಾಕರಿಸಿದೆ. ಅಷ್ಟೊಂದು ತೈಲದ ಪ್ರಮಾಣ ಸದ್ಯಕ್ಕಿಲ್ಲ ಎಂದು ರೋಸ್ ನೆಫ್ಟ್ ತಿಳಿಸಿದೆ.
ಕಾರಣವೇನು?
ಭಾರತದ ಎರಡು ತೈಲ ಕಂಪನಿಗಳಿಗೆ ಹೆಚ್ಚುವರಿ ತೈಲ ಮಾರಾಟಕ್ಕೆ ರಷ್ಯಾದ ರೋಸ್ ನೆಫ್ಟ್ ನಿರಾಕರಿಸಿದ್ದೇಕೆ ಎಂಬ ಪ್ರಶ್ನೆ ಉಂಟಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಹೊರತಾಗಿಯೂ ರಷ್ಯಾದ ತೈಲ ರಫ್ತು ಅಬಾಧಿತವಾಗಿ ಮುಂದುವರಿದಿರುವುದು ಹಾಗೂ ಅದರ ಗ್ರಾಹಕರು ಎಂದಿನಂತೆ ಖರೀದಿಸುತ್ತಿರುವುದರಿಂದ ಹೆಚ್ಚುವರಿ ರಿಯಾಯಿತಿ ದರದಲ್ಲಿ ತೈಲ ನೀಡಲು ರಷ್ಯನ್ ಕಂಪನಿಗಳು ಈಗ ನಿರಾಸಕ್ತಿ ಹೊಂದಿವೆ. ಆದ್ದರಿಂದ ಭಾರತದ ತೈಲ ಕಂಪನಿಗಳಿಗೆ ಹಾದಿ ದುರ್ಗಮವಾಗಿದೆ. ದುಬಾರಿ ದರದಲ್ಲಿ ತೈಲ ಖರೀದಿಸಬೇಕಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಹೀಗಿದ್ದರೂ ಭಾರತೀಯ ಕಂಪನಿಗಳು ಹರ ಸಾಹಸ ಮುಂದುವರಿಸಿವೆ.
ಇದನ್ನೂ ಓದಿ: Oil price up: ಕಚ್ಚಾ ತೈಲ ದರ ಸ್ಫೋಟ, ಬ್ಯಾರೆಲ್‌ಗೆ 120 ಡಾಲರ್ ಗೆ ಜಿಗಿತ