ನವ ದೆಹಲಿ: ಸಾಮಾನ್ಯವಾಗಿ ಇರಾಕ್ ಎಂದರೆ ಭಾರತಕ್ಕೆ ಹೆಚ್ಚು ಕಚ್ಚಾ ತೈಲವನ್ನು ಸರಬರಾಜು ಮಾಡುತ್ತಿದ್ದ ಕೊಲ್ಲಿ ರಾಷ್ಟ್ರವಾಗಿತ್ತು. ಆದರೆ ಇದೀಗ ರಷ್ಯಾವೇ (Russian oil) ಅತಿ ಹೆಚ್ಚು ತೈಲವನ್ನು ಸರಬರಾಜು ಮಾಡುವ ಏಕೈಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತವು ಕೊಲ್ಲಿ ರಾಷ್ಟ್ರಗಳಿಂದ ತರಿಸಿಕೊಳ್ಳುತ್ತಿಲ್ಲ ಎಂದಲ್ಲ, ಆದರೆ ಕಡಿಮೆಯಾಗಿದೆ. ಆ ಜಾಗವನ್ನು ರಷ್ಯಾ ತನ್ನದಾಗಿಸಿದೆ. ಭಾರತವು ರಷ್ಯಾದಿಂದ ಮಾರ್ಚ್‌ನಲ್ಲಿ ದಿನಕ್ಕೆ ಸರಾಸರಿ 16.4 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿದೆ.
ಹೀಗೆ ರಷ್ಯಾದಿಂದ ಖರೀದಿಸುತ್ತಿರುವ ತೈಲವನ್ನು ಭಾರತವು ಡೀಸೆಲ್, ಪೆಟ್ರೋಲ್ ಆಗಿ ಪರಿವರ್ತಿಸಿ ತನ್ನ ಬಳಕೆಗೆ ಹಾಗೂ ರಫ್ತಿಗೂ ಬಳಸುತ್ತದೆ. ರಷ್ಯಾದ ತೈಲ ಡಿಸ್ಕೌಂಟ್ ದರದಲ್ಲಿ ಲಭಿಸುತ್ತಿರುವುದರಿಂದ ಅದರ ಪ್ರಯೋಜನವನ್ನು ಭಾರತ ಪಡೆಯುತ್ತಿದೆ.
2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾಗುವುದಕ್ಕೆ ಮುನ್ನ ಭಾರತದ ತೈಲ ಆಮದಿನಲ್ಲಿ ರಷ್ಯಾದ ಪಾಲು 1%ಗಿಂತಲೂ ಕಡಿಮೆ ಇತ್ತು. ಆದರೆ ಕಳೆದ ಮಾರ್ಚ್ ವೇಳೆಗೆ 34%ಕ್ಕೆ ಏರಿಕೆಯಾಗಿದೆ. ಇರಾಕಿಗೆ ಹೋಲಿಸಿದರೆ ರಷ್ಯಾದಿಂದ ಅದರ ಎರಡು ಪಟ್ಟು ಹೆಚ್ಚು ತೈಲವನ್ನು ಭಾರತವು ಮಾರ್ಚ್‌ನಲ್ಲಿ ಆಮದು ಮಾಡಿಕೊಂಡಿದೆ.
ವೊರ್ಟೆಕ್ಸಾ ಪ್ರಕಾರ ಸೌದಿ ಅರೇಬಿಯಾ ಭಾರತಕ್ಕೆ ತೈಲ ಪೂರೈಸುತ್ತಿರುವ ಎರಡನೇ ಅತಿ ದೊಡ್ಡ ಪೂರೈಕೆದಾರ ರಾಷ್ಟ್ರ. ಯುಎಇ, ಅಮೆರಿಕ ಕೂಡ ಭಾರತಕ್ಕೆ ಕಚ್ಚಾ ತೈಲ ಒದಗಿಸುತ್ತಿದೆ. ಯುರೋಪ್ ಕಳೆದ ಡಿಸೆಂಬರ್‌ನಿಂದ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡದಿರುವುದರಿಂದ ಆ ಕೊರತೆಯನ್ನು ತುಂನಲು ರಷ್ಯಾ ಕೂಡ ಭಾರತಕ್ಕೆ ತೈಲ ಪೂರೈಸಲು ಉತ್ಸುಕವಾಗಿದೆ.