ಬೆಂಗಳೂರು: ಫ್ಲಿಪ್‌ಕಾರ್ಟ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಸಚಿನ್ ಬನ್ಸಾಲ್ ಅವರಿಗೆ ಹೊಸ ಬ್ಯಾಂಕ್ ಸ್ಥಾಪಿಸಲು ರಿಸರ್ವ್ ಬ್ಯಾಂಕ್ ಲೈಸೆನ್ಸ್ ನಿರಾಕರಿಸಿದೆ.
ಫ್ಲಿಪ್‌ಕಾರ್ಟ್ ಅನ್ನು ವಾಲ್ ಮಾರ್ಟ್‌ಗೆ ಮಾರಾಟ ಮಾಡಿದ ಬಳಿಕ ಸಚಿನ್ ಬನ್ಸಾಲ್ ಬ್ಯಾಂಕ್ ಸ್ಥಾಪನೆಗೆ ಲೈಸೆನ್ಸ್ ಹೊಂದಲು ಯತ್ನಿಸಿದ್ದರು. ಆದರೆ ಬನ್ಸಾಲರ ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪರವಾನಗಿ ಪಡೆಯಲು ಅನರ್ಹವಾಗಿದೆ ಎಂದು ಆರ್ ಬಿಐ ತಿಳಿಸಿದೆ. ಹೀಗಿದ್ದರೂ, ಇದು ಮುಗಿದ ಅಧ್ಯಾಯವಲ್ಲ, ಬ್ಯಾಂಕ್ ಸ್ಥಾಪಿಸಲು ಮುಂದೆಯೂ ಯತ್ನಿಸುವುದಾಗಿ ಸಚಿನ್ ಬನ್ಸಾಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಸ್ಥಾಪಿಸುವ ಕನಸು ಈಗಲೂ ಇದೆ. ನಮ್ಮ ಮುಂದೆ ಹಲವು ಆಯ್ಕೆಗಳೂ ಇವೆ ಎಂದು ಬನ್ಸಾಲ್ ಹೇಳಿದ್ದಾರೆ.
ಆರ್ ಬಿಐ ಹೊಸ ಬ್ಯಾಂಕ್ ಸ್ಥಾಪನೆ ಕುರಿತು 11 ಅರ್ಜಿಗಳನ್ನು ಸ್ವೀಕರಿಸಿದ್ದು, ಇದರಲ್ಲಿ 6 ಅರ್ಜಿಗಳನ್ನು ತಿರಸ್ಕರಿಸಿದೆ.
ಆರ್ ಬಿಐ ಅರ್ಜಿ ತಿರಸ್ಕರಿಸಿದ್ದೇಕೆ ಎಂದು ವಿಶ್ಲೇಷಿಸಲಾಗುವುದು. ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಬನ್ಸಾಲ್ ತಿಳಿಸಿದ್ದಾರೆ.
ಫ್ಲಿಪ್ ಕಾರ್ಟ್ ಅನ್ನು ವಾಲ್ ಮಾರ್ಟ್ ಗೆ ಮಾರಾಟ ಮಾಡಿದ ಬಳಿಕ ಸಚಿನ್ ಬನ್ಸಾಲ್ ಅವರು ನವಿ ಟೆಕ್ನಾಲಜಿಯಲ್ಲಿ 4,000 ಕೋಟಿ ರೂ. ಹೂಡಿದ್ದರು. ಈ ಸಂಸ್ಥೆಯ ಭಾಗವಾಗಿ ಬ್ಯಾಂಕ್ ಸ್ಥಾಪನೆಗೆ ಯತ್ನಿಸಿದ್ದರು.