ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ಮುಖ್ಯಸ್ಥರಾಗಿ ಹಾಲಿ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಎಸ್. ಪರೇಖ್ ಅವರೇ ಇನ್ನೂ ಐದು ವರ್ಷ ಮುಂದುವರೆಯಲಿದ್ದಾರೆ.
ರಾಜ್ಯದ ಹೆಮ್ಮೆಯ ಈ ಐಟಿ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯು ಪರೇಖ್ ಅವರನ್ನು 2022ರ ಜುಲೈ 1 ರಿಂದ ಐದು ವರ್ಷಗಳ ಅವಧಿಗೆ ಅಂದರೆ, 2027ರ ಮಾರ್ಚ್ 31ರವರೆಗೆ ಈ ಹುದ್ದೆಯಲ್ಲಿ ಮುಂದುವರಿಸಲು ತೀರ್ಮಾನಿಸಿದೆ.
ಸಲೀಲ್ ಪರೇಖ್ 2018ರ ಜನವರಿಯಿಂದ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಟಿ ಸೇವಾ ಕ್ಷೇತ್ರದಲ್ಲಿ 30ಕ್ಕೂ ಹೆಚ್ಚು ವರ್ಷ ಜಾಗತಿಕ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಪರೇಖ್ ಕಳೆದ ನಾಲ್ಕು ವರ್ಷ ಕಂಪನಿಯನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ.
“ಕಂಪನಿಯ ನಿರ್ದೆಶಕರ ಮಂಡಳಿಯ ಸಭೆಯ ಅವರ ಸೇವೆಯನ್ನು ಮುಂದುವರಿಸಲು ತೀರ್ಮಾನಿಸಿದೆ. ಇದಕ್ಕೆ ಷೇರುದಾರರ ಒಪ್ಪಿಗೆಯನ್ನು ಪಡೆದುಕೊಳ್ಳಬೇಕಿದೆʼʼ ಎಂದು ಕಂಪನಿಯ ಪ್ರಕಟಣೆಯು ತಿಳಿಸಿದೆ. ಕಂಪನಿಯ ನಾಮ ನರ್ದೇಶನ ಮತ್ತು ವೇತನ ಸಮಿತಿ (NRC) ಶಿಫಾರಸ್ಸಿನ ಮೇರೆಗೆ ನಿರ್ದೇಶಕರ ಮಂಡಳಿಯು ಈ ತೀರ್ಮಾನ ತೆಗೆದುಕೊಂಡಿದೆ.
ಇದನ್ನೂ ಓದಿ| ಸಿಂಗಾಪುರದ ಫ್ಯಾಷನ್ ಸ್ಟಾರ್ಟಪ್ ಝಿಲಿಂಗೊ ಸಿಇಒ ಅಂಕಿತಿ ಬೋಸ್ ವಜಾ
2018ರಲ್ಲಿ ಪರೇಖ್ ಈ ಹುದ್ದೇಗಿರಿದಾಗ ಇನ್ಫೋಸಿಸ್‌ನ ಸಹ ಸಂಸ್ಥಾಪಕ ಮತ್ತು ಆಗಿನ ಚೇರ್ಮನ್ ನಂದನ್ ನಿಲೇಕಣಿ “ಈ ಹುದ್ದೆಗೆ ಇವರು ಸೂಕ್ತ ವ್ಯಕ್ತಿʼʼ ಎಂದು ಬಣ್ಣಿಸಿದ್ದರು. ಇದನ್ನು 58 ವರ್ಷದ ಪರೇಖ್ ಕಳೆದ ನಾಲ್ಕು ವರ್ಷದಲ್ಲಿ ಸಾಬೀತುಪಡಿಸಿದ್ದಾರೆ.
ಈ ಹಿಂದೆ ವಿಶಾಲ್ ಸಿಕ್ಕಾ ಸಿಇಒ ಆಗಿದ್ದ ಸಂದರ್ಭದಲ್ಲಿ ಇನ್ಫೋಸಿಸ್‌ನಲ್ಲಿದ್ದ ಗೊಂದಲಗಳನ್ನು ಬಗೆಹರಿಸಿ, ಕಂಪನಿಯನ್ನು ಮುನ್ನೆಡೆಸುವಲ್ಲಿ ಪರೇಖ್ ಯಶಸ್ವಿಯಾಗಿದ್ದು, ಹೀಗಾಗಿಯೇ ಅವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಇದೇ ಹುದ್ದೆಯಲ್ಲಿ ಮುಂದುವರಿಸುವ ತೀರ್ಮಾನಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.