ಬೆಂಗಳೂರು: ಹರಿಯಾಣ ಮೂಲದ ನಿಧಿ ಸಿಂಗ್ ಮತ್ತು ಶಿಖರ್ ವೀರ್ ಸಿಂಗ್ ಕುರುಕ್ಷೇತ್ರ ವಿಶ್ವ ವಿದ್ಯಾಲಯದಲ್ಲಿ ಕಾಲೇಜು ದಿನಗಳಿಂದಲೇ ಪರಿಚಿತರು. ಇಬ್ಬರ ಸ್ನೇಹ ಮುಂದುವರಿದು ಐದು ವರ್ಷಗಳ ಹಿಂದೆ ಸತಿಪತಿಗಳಾಗಿದ್ದರು. ಕಾರ್ಪೊರೇಟ್ ಕಂಪನಿಯಲ್ಲಿ ಕೈತುಂಬ ಸಂಬಳದ ಉದ್ಯೋಗ, ವೇತನ ಗಳಿಸುತ್ತಿದ್ದರು. (Samosa Singh) ಇಬ್ಬರಿಗೂ ಸ್ವಂತ ಉದ್ದಿಮೆ ಮಾಡಬೇಕು ಎಂಬ ಉತ್ಸಾಹ ಇತ್ತು. ಆಗ ಅವರು ಆರಂಭಿಸಿದ್ದು ಬೆಂಗಳೂರಿನಲ್ಲಿ ಸಮೋಸಾ ಮಾರಾಟ.
ಶಿಖರ್ ವೀರ್ ಸಿಂಗ್ ಅವರಿಗೆ ಉದ್ಯೋಗಿಯಾಗಿದ್ದ ದಿನದಿಂದಲೂ ಸಮೋಸ ವ್ಯಾಪಾರ ಶುರು ಮಾಡಬೇಕು ಎಂಬ ಆಲೋಚನೆ ಆಗಾಗ್ಗೆ ಸುಳಿಯುತ್ತಿತ್ತು. ಭಾರತದಲ್ಲಿ ಜನಪ್ರಿಯವಾಗಿರುವ ಸಮೋಸಾವನ್ನು ದೊಡ್ಡ ಬ್ರಾಂಡ್ ಆಗಿ ಕಟ್ಟಬಹುದು ಎಂದು ಸಿಂಗ್ ಕನಸು ಕಾಣುತ್ತಿದ್ದರು. ಅದನ್ನು ಸಾಧಿಸಲು ಸಮೋಸಾ ಸಿಂಗ್ ಎಂಬ ಬ್ರಾಂಡ್ ಅನ್ನೇ ಕಟ್ಟಿದರು. ಶಿಖರ್ ಅವರು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಎಂಟೆಕ್ ಪದವೀಧರರು. ಹೈದರಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸ್‌ನಲ್ಲಿ ಉನ್ನತ ವ್ಯಾಸಂಗ ನಡೆಸಿದ್ದರು. 2016ರಲ್ಲಿ ಬೆಂಗಳೂರಿನಲ್ಲಿ ಸಮೋಸಾ ಸಿಂಗ್ ಮಳಿಗೆಯನ್ನು ದಂಪತಿ ಆರಂಭಿಸಿದರು. ಮುಂದೆ ನಡೆದದ್ದು ಇತಿಹಾಸ. ನಿಧಿ ಅವರ ತಂದೆ ವಕೀಲರು ಹಾಗೂ ತಾಯಿ ನಿವೃತ್ತ ಶಿಕ್ಷಕಿ. ಶಿಖರ್ ಅವರ ತಂದೆ ಅಂಬಾಲ ಮತ್ತು ಚಂಡೀಗಢದಲ್ಲಿ ಸ್ವಂತ ಜ್ಯುವೆಲ್ಲರಿ ಶೋ ರೂಮ್ ಅನ್ನು ಹೊಂದಿದ್ದಾರೆ. ಅವರು 12ನೇ ತರಗತಿ ಪೂರೈಸಿದ್ದಾರೆ.
ಬಂಡವಾಳ ಹೂಡಿಕೆಗೆ ಮನೆ ಮಾರಿದ ದಂಪತಿ!
ತಮ್ಮ ಉಳಿತಾಯದಿಂದ ಸಮೋಸಾ ಮಾರಾಟದ ಮಳಿಗೆ ಶುರು ಮಾಡಿದರು. ಆದರೆ ಶೀಘ್ರದಲ್ಲಿಯೇ ತಮ್ಮ ಕನಸಿನ ಅಪಾರ್ಟ್‌ಮೆಂಟ್ ಅನ್ನೇ ಮಾರಿ 80 ಲಕ್ಷ ರೂ. ಹೂಡಿಕೆ ಮಾಡಿದರು. ಆ ಹಣದಲ್ಲಿ ಅತ್ಯಾಧುನಿಕ ಅಡುಗೆಮನೆ (Kitchen) ಅನ್ನು ನಿರ್ಮಿಸಿದರು. ಸಗಟು ಆರ್ಡರ್‌ಗಳನ್ನು ಪಡೆಯಲು ಇದರಿಂದ ಅನುಕೂಲವಾಯಿತು. ಅವರ ದಿಟ್ಟ ನಿರ್ಧಾರ ಉತ್ತಮ ಫಲ ನೀಡಿತ್ತು.
ನಾವು ನಮ್ಮ ಮನೆಯನ್ನು ಮ್ಯಾಜಿಕ್ ಬ್ರಿಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದೆವು. 80 ಲಕ್ಷ ರೂ.ಗೆ ಮಾರಾಟವಾಯಿತು. ಸಮೋಸಾ ಸಿಂಗ್ ಅಭಿವೃದ್ಧಿಗೆ ನಮಗೆ ಹಣ ಬೇಕಿತ್ತು. ನಮಗೆ ನಮ್ಮ ವ್ಯಾಪಾರ ಚೆನ್ನಾಗಿ ಆಗಲಿದೆ ಎಂಬ ವಿಶ್ವಾಸ ಇತ್ತು ಎನ್ನುತ್ತಾರೆ ನಿಧಿ. ಅವರ ವಿಶ್ವಾಸ ಸುಳ್ಳಾಗಲಿಲ್ಲ. ಸಿಂಗ್ ದಂಪತಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅತ್ಯಾಧುನಿಕ 1500 ಚದರ ಅಡಿ ಪ್ರದೇಶದಲ್ಲಿ ಸಮೋಸಾ ಕಿಚನ್ ನಿರ್ಮಿಸಿದರು. ಈಗ ಬೆಂಗಳೂರಿನಲ್ಲಿ ಸಂಪೂರ್ಣ ಆಟೊಮ್ಯಾಟಿಕ್ ಉತ್ಪಾದನಾ ಘಟಕವನ್ನು ಹೊಂದಿದ್ದರು. ಪ್ರಸಕ್ತ ಸಾಲಿನಲ್ಲಿ ವಾರ್ಷಿಕ 45 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ತಿಂಗಳಿಗೆ ಅಂದಾಜು 30,000 ಸಮೋಸಾ ಮಾರಾಟ ಮಾಡುತ್ತಿದ್ದಾರೆ.
ಓದು ಮುಗಿಸಿದ ಬಳಿಕ ನಿಧಿ ಅವರು ಅಮೆರಿಕ ಮೂಲದ ಫಾರ್ಮಾ ಕಂಪನಿಯಲ್ಲಿ ಉದ್ಯೋಗ ಗಳಿಸಿದ್ದರು. ಅದರ ಕಚೇರಿ ಗುರ್‌ಗಾಂವ್‌ನಲ್ಲಿತ್ತು. 2017ರಲ್ಲಿ ನಿಧಿ ಅವರು ಕೆಲಸ ಬಿಟ್ಟಾಗ ವಾರ್ಷಿಕ 30 ಲಕ್ಷ ರೂ. ವೇತನ ಅವರಿಗಿತ್ತು. ಆರಂಭದಲ್ಲಿ ಶಿಖರ್ ಅವರು ಸಮೋಸಾ ವ್ಯಾಪಾರ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ನಿಧಿ ಅವರು ಕಡೆಗಣಿಸಿದ್ದರಂತೆ. ನಿಜಕ್ಕೂ ಇಂಪಾರ್ಟೆಂಟ್ ಆಗಿರುವುದನ್ನು ಮಾತನಾಡಿ ಎಂದು ಕೋಪಿಸಿದ್ದರಂತೆ.
ಸಮೋಸಾ ವ್ಯಾಪಾರ ಶುರು ಮಾಡಿದ ಸಾಹಸ ಹೇಗಿತ್ತು?
ಎಂಟೆಕ್ ಮುಗಿಸಿದ ಬಳಿಕ ಶಿಖರ್ ಅವರು ಬೆಂಗಳೂರಿನಲ್ಲಿ ಬಯೊಕಾನ್ ಕಂಪನಿಯನ್ನು ವಿಜ್ಞಾನಿಯಾಗಿ ಸೇರಿದ್ದರು. 2015 ತನಕ ಅಲ್ಲಿ ಕೆಲಸ ಮಾಡಿದ್ದರು. ಬಳಿಕ ರಾಜೀನಾಮೆ ಕೊಟ್ಟು ಸಮೋಸಾ ಕಿಂಗ್ ಮಳಿಗೆ ಸ್ಥಾಪನೆಗೆ ಮುಂದಾದರು.
ಆರಂಭದಲ್ಲಿ ಶಿಖರ್ ವೀರ್ ಸಿಂಗ್ ಅವರು ಎಸ್‌ಬಿಐ ಶಾಖೆಯನ್ನು ಸಂಪರ್ಕಿಸಿದರು. ಎಸ್‌ಬಿಐ ಬ್ಯಾಂಕ್ ಎದುರೇ ಸಮೋಸಾ ಶಾಪ್ ಇಡುವುದಾಗಿಯೂ ಪ್ರಸ್ತಾಪಿಸಿದ್ದರಂತೆ. ಕೊನೆಗೂ ಪಟ್ಟು ಹಿಡಿದು ಉಳಿತಾಯದ ಹಣವನ್ನೆಲ್ಲ ಹೊಂದಿಸಿದರು. ಸಾಲದಿದ್ದಾಗ ಅಪಾರ್ಟ್‌ಮೆಂಟ್ ಅನ್ನೂ ಮಾರಿದರು. ಭಿನ್ನ ರುಚಿಯ ಸಮೋಸಾ ತಯಾರಿಸಿ ಮಾರಾಟ ಶುರು ಮಾಡಿದ್ದರು. ಈಗ ಬೆಂಗಳೂರು ಮಾತ್ರವಲ್ಲದೆ ಮುಂಬಯಿ, ಪುಣೆ, ಚೆನ್ನೈ ಸೇರಿದಂತೆ ಎಂಟು ನಗರಗಳಲ್ಲಿ 50 ಕ್ಲೌಡ್ ಕಿಚನ್‌ಗಳನ್ನು ಕಂಪನಿ ಒಳಗೊಂಡಿದೆ.