ಸ್ಯಾನ್ ಫ್ರಾನ್ಸಿಸ್ಕೊ: ಜಗತ್ತಿನಲ್ಲೇ ಅತಿ ಹೆಚ್ಚು ಮೌಲ್ಯದ ಕಂಪನಿಯಾಗಿ ಸೌದಿ ಅರೇಬಿಯಾದ ಸಾರ್ವಜನಿಕ ವಲಯದ ತೈಲ ಕಂಪನಿ ಸೌದಿ ಅರಾಮ್ಕೊ (SAUDI ARAMCO) ಹೊರಹೊಮ್ಮಿದೆ.
ಇದುವರೆಗೆ ಅಮೆರಿಕದ ತಂತ್ರಜ್ಞಾನ ದಿಗ್ಗಜ ಹಾಗೂ ಐಫೋನ್ ಉತ್ಪಾದಕ ಆಪಲ್ ಜಗತ್ತಿನ ಅತಿ ಹೆಚ್ಚು ಮೌಲ್ಯದ ಕಂಪನಿಯಾಗಿತ್ತು. ಹೆಚ್ಚುತ್ತಿರುವ ತೈಲ ಬೆಲೆಯ ಪರಿಣಾಮ ತೈಲ ಕಂಪನಿಗಳ ಷೇರುಗಳು ಜಿಗಿಯುತ್ತಿದ್ದು, ತಂತ್ರಜ್ಞಾನ ಕಂಪನಿಗಳ ಷೇರುಗಳು ಕುಸಿದಿವೆ.
ಸೌದಿ ಅರೇಬಿಯಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಂಪನಿಯಾದ ಸೌದಿ ಅರಾಮ್ಕೊ, ಜಗತ್ತಿನ ಅತಿ ದೊಡ್ಡ ತೈಲೋತ್ಪಾದಕ ಕಂಪನಿಯಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಬುಧವಾರ 2.4 ಲಕ್ಷ ಕೋಟಿ ಡಾಲರ್‌ಗೆ ವೃದ್ಧಿಸಿದೆ. (181.5 ಲಕ್ಷ ಕೋಟಿ ರೂ.)
ಆಪಲ್ ಷೇರು ದರ ಕುಸಿತ: ಐಫೋನ್ ಉತ್ಪಾದಕ ಆಪಲ್ ಕಂಪನಿ ಈ ವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ ನಿರೀಕ್ಷೆ ಮೀರಿ ಲಾಭ ಗಳಿಸಿದ್ದರೂ, ಗ್ರಾಹಕರ ಬೇಡಿಕೆ ಇದ್ದರೂ, ಷೇರುಗಳ ದರ ಕುಸಿದಿತ್ತು. ಇದರ ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆಯಾಗುತ್ತಿದೆ.
ಕೋವಿಡ್ ಬಿಕ್ಕಟ್ಟು ಮತ್ತು ಜಾಗತಿಕ ಪೂರೈಕೆ ಸರಣಿಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಆಪಲ್‌ಗೆ ಏಪ್ರಿಲ್-ಜೂನ್ ಅವಧಿಯಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ 4 ರಿಂದ 8 ಶತಕೋಟಿ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ. ( ಅಂದಾಜು 30,000 ಕೋಟಿ ರೂ.ಗಳಿಂದ 60,000 ಕೋಟಿ ರೂ.)
ಸೆಮಿಕಂಡಕ್ಟರ್ ಚಿಪ್ ಗಳ ಜಾಗತಿಕ ಮಟ್ಟದ ಕೊರತೆ ಉದ್ಯಮವನ್ನು ಕಂಗೆಡಿಸಿದ್ದು, ಆಪಲ್ ಕಂಪನಿಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಪೂರೈಸಲು ಅಡಚಣೆಯಾಗಿದೆ. ಪೂರೈಕೆಯ ಸರಣಿಯಲ್ಲಿ ಈ ರೀತಿ ಬಿಕ್ಕಟ್ಟು ಸಂಭವಿಸಿದೆ.
ಸೌದಿ ಆರಾಮ್ಕೊಗೆ ಭರ್ಜರಿ ಲಾಭ
ತೈಲ ದಿಗ್ಗಜ ಸೌದಿ ಆರಾಮ್ಕೊ ಕಂಪನಿಗೆ ಕಳೆದ ವರ್ಷ ಲಾಭದಲ್ಲಿ ಶೇ.124ರಷ್ಟು ಹೆಚ್ಚಳವಾಗಿದೆ. ಕೋವಿಡ್ ಬಿಕ್ಕಟ್ಟಿನ ಬಳಿಕ ಜಗತ್ತು ಚೇತರಿಸುತ್ತಿದ್ದು, ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿದೆ. ಹೀಗಾಗಿ ತೈಲಕ್ಕೆ ಬೇಡಿಕೆ ಗಗನಕ್ಕೇರಿದೆ. ಇದರ ಪರಿಣಾಮ ಸೌದಿ ಆರಾಮ್ಕೊ ಲಾಭ ಮತ್ತು ಆದಾಯ ಭರಪೂರ ಹೆಚ್ಚಳವಾಗಿದೆ. ಆದಾಯ ಶೇ.124ರಷ್ಟು ಜಿಗಿದಿದೆ. 2020 ರಲ್ಲಿ 49 ಶತಕೋಟಿ ಡಾಲರ್(3.57ಲಕ್ಷ ಕೋಟಿ ರೂ) ನಷ್ಟಿದ್ದ ಆದಾಯ 2021ರಲ್ಲಿ 110 ಶತಕೋಟಿ ಡಾಲರ್‌ಗೆ ( 8.25ಲಕ್ಷ ಕೋಟಿ ರೂ.) ವೃದ್ಧಿಸಿದೆ. ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಬಳಿಕ ಸೌದಿ ಅರಾಮ್ಕೊ ಕಂಪನಿಯ ಮೇಲೆ ತೈಲೋತ್ಪಾದನೆಯನ್ನು ಹೆಚ್ಚಿಸಬೇಕೆಂಬ ಒತ್ತಡ ತೀವ್ರವಾಗಿತ್ತು. ಹೀಗಿದ್ದರೂ, ಜಾಗತಿಕ ಅನಿಶ್ಚಿತತೆಯ ಪರಿಣಾಮ ಕಂಪನಿಯ ಮುನ್ನೋಟವೂ ಅನಿಶ್ಚತೆತೆಯಲ್ಲಿದೆ ಎಂದು ಸೌದಿ ಅರಾಮ್ಕೊದ ಅಧ್ಯಕ್ಷ ಮತ್ತು ಸಿಇಒ ಅಮಿನ್ ನಾಸಿರ್ ತಿಳಿಸಿದ್ದಾರೆ. ಕಂಪನಿಯು ನಿರಂತರವಾಗಿ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ ಎಂದೂ ಹೇಳಿದ್ದಾರೆ.
ಹಣದುಬ್ಬರ ಮತ್ತಷ್ಟು ಹೆಚ್ಚಇದರೆ ಬಳಕೆ ಕಡಿಮೆಯಾಗಿ ತೈಲಕ್ಕೆ ಬೇಡಿಕೆ ಇಳಿಕೆಯಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ತಜ್ಞರು.