ಬೆಂಗಳೂರು: ಸ್ಟಾರ್ಟಪ್‌ಗಳಿಗೆ ಹಣಕಾಸು ಸೌಲಭ್ಯ, ಅದರಲ್ಲೂ ಮುಖ್ಯವಾಗಿ ಸಾಲ ಸೌಲಭ್ಯವನ್ನು ಪಡೆಯುವುದು ಸುಲಭವಲ್ಲ. ಆದರೆ ಮತ್ತೊಂದು ಕಡೆ ಈ ಸಮಸ್ಯೆಯನ್ನು ಬಗೆಹರಿಸಲು ದೇಶದ ಅತಿ ದೊಡ್ಡ ಬ್ಯಾಂಕ್ ಹಾಗೂ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಇದೀಗ ಮುಂದಾಗಿದೆ. ಎಸ್‌ಬಿಐ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸ್ಟಾರ್ಟಪ್‌ಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಮೊದಲ ಬಾರಿಗೆ ವಿಶೇಷ ಶಾಖೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.
ದೇಶದ ಸ್ಟಾಟರ್ಪ್ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಇಂಥ ವಿಶೇಷ ಶಾಖೆಯನ್ನು ತೆರೆಯಲು ಎಸ್ ಬಿಐಗೆ ಸಹಜ ಆಯ್ಕೆಯಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಖರ ಅವರು ತಿಳಿಸಿದರು.
ಎಸ್‌ಬಿಐನ ಸ್ಟಾರ್ಟಪ್ ಶಾಖೆಯು ಕೋರಮಂಗಲದಲ್ಲಿ ಆರಂಭವಾಗಿದ್ದು, ನೋಂದಾಯಿತ ಸ್ಟಾರ್ಟಪ್‌ಗಳಿಗೆ ಅಗತ್ಯವಿರುವ ಸಮಗ್ರ ಬ್ಯಾಂಕಿಂಗ್ ಸೇವೆಗಳನ್ನು ನೀಡಲಿದೆ. ಕೋರಮಂಗಲ, ಸಮೀಪದ ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ ಬಡಾವಣೆಯಲ್ಲಿ ಸ್ಟಾರ್ಟಪ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಭಾಗದ ಸ್ಟಾರ್ಟಪ್‌ಗಳಿಗೆ ಎಸ್‌ಬಿಐ ಸ್ಟಾರ್ಟಪ್ ಶಾಖೆ ಸಹಕಾರಿಯಾಗಲಿದೆ. ಹಣಕಾಸು ಮತ್ತು ಬಿಸಿನೆಸ್ ಸಲಹಾ ಸೇವೆ ಎರಡನ್ನೂ ಈ ಹೊಸ ಶಾಖೆ ಒದಗಿಸಲಿದೆ.
ಎಸ್‌ಬಿಐ ಸ್ಟಾರ್ಟಪ್ ಶಾಖೆಯಲ್ಲಿ ಸ್ಟಾರ್ಟಪ್‌ಗಳಿಗೆ ಅನುಕೂಲವೇನು? : ಸ್ಟಾರ್ಟಪ್‌ಗಳಿಗೆ ಖಾತೆ, ಸಾಲಗಳು, ಠೇವಣಿ, ವಹಿವಾಟು ಬ್ಯಾಂಕಿಂಗ್, ಹಣ ರವಾನೆ, ಪಾವತಿ, ವಿದೇಶಿ ವಿನಿಮಯ, ವಿಮೆ, ಕ್ರೆಡಿಟ್ ಕಾರ್ಡ್, ಮ್ಯೂಚುವಲ್ ಫಂಡ್, ಕ್ಯಾಪಿಟಲ್ ಮಾರುಕಟ್ಟೆ ಮತ್ತು ಕಾನೂನು ಸೇವೆ, ಆರಂಭಿಕ ಷೇರು ಬಿಡುಗಡೆ (ಐಪಿಒ) ಪ್ರಕ್ರಿಯೆಗೆ ನೆರವು, ಎಫ್‌ಪಿಒಗೆ ನೆರವು ಸೌಲಭ್ಯವು ಈ ವಿಶೇಷ ಬ್ಯಾಂಕ್ ಶಾಖೆಯಲ್ಲಿ ಸಿಗಲಿದೆ. ಹಣಕಾಸು ಮತ್ತು ಬಿಸಿನೆಸ್ ಸಲಹಾ ಸೇವೆ ಸಿಗಲಿದೆ.
ಸ್ಟಾರ್ಟಪ್‌ಗಳ ಬಿಸಿನೆಸ್‌ಗೆ ಅಗತ್ಯವಿರುವ ಕ್ಯಾಪಿಟಲ್ ಮಾರ್ಕೆಟ್ ನೆರವನ್ನೂ ಎಸ್‌ಬಿಐ ಒದಗಿಸಲಿದೆ. ಈಕ್ವಿಟಿ ಸಂಗ್ರಹ, ನೋಂದಣಿ, ಪಿಇ, ವಿಸಿ ಫಂಡ್, ಫೊರೆಕ್ಸ್, ಟ್ರೆಶರಿ ಸಲ್ಯೂಷನ್ಸ್, ವೆಲ್ತ್ ಮ್ಯಾನೇಜ್‌ಮೆಂಟ್ ಇತ್ಯಾದಿ ಸೇವೆಗಳನ್ನು ಒದಗಿಸಲಿದೆ. ಕರ್ನಾಟಕ ಸರಕಾರ ಸ್ಟಾರ್ಟಪ್ ಅಭಿವೃದ್ಧಿಗೆ ಪೂರಕವಾಗಿ ಕೈಗೊಂಡಿರುವ KITS ( ಕರ್ನಾಟಕ ಇನ್ನೊವೇಶನ್ ಟೆಕ್ನಾಲಜಿ ಸೊಸೈಟಿ) ಮತ್ತು (ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್) KDEM ಯೋಜನೆಯಲ್ಲಿ ಎಸ್‌ಬಿಐ ಕೂಡ ಪಾಲುದಾರಿಕೆಯನ್ನು ಹೊಂದಿದೆ ಎಂದು ದಿನೇಶ್ ಖರ ವಿವರಿಸಿದರು.
೧೦೪ ಸ್ಟಾರ್ಟಪ್‌ಗಳಿಗೆ ೨೫೦ ಕೋಟಿ ರೂ. ಸಾಲ ವಿತರಣೆ
ಎಸ್‌ಬಿಐ ಸ್ಟಾರ್ಟಪ್‌ಗಳಿಗೆ ಈಗಾಗಲೇ ಸಾಲ ವಿತರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದುವರೆಗೆ ನಾನಾ ರಾಜ್ಯಗಳಲ್ಲಿರುವ ಒಟ್ಟು ೧೦೪ ಸ್ಟಾರ್ಟಪ್‌ಗಳಿಗೆ ೨೫೦ ಕೋಟಿ ರೂ. ಸಾಲವನ್ನು ವಿತರಿಸಿದೆ ಎಂದು ದಿನೇಶ್ ಖರ ತಿಳಿಸಿದ್ದಾರೆ. ದೇಶದಲ್ಲಿ ಸ್ಟಾರ್ಟಪ್‌ಗಳಿಗೆ ಉಜ್ವಲ ಭವಿಷ್ಯವಿದ್ದು, ಉದ್ಯೋಗ ಸೃಷ್ಟಿಯ ದೃಷ್ಟಿಯಿಂದಲೂ ಮಹತ್ವ ಗಳಿಸುತ್ತಿವೆ. ಸ್ಟಾರ್ಟಪ್‌ಗಳಿಗೆ ಬ್ಯಾಂಕಿಂಗ್ ಸೇವೆಯ ವಿಸ್ತರಣೆ ನಿರ್ಣಾಯಕವಾಗಿದೆ ಎಂದರು. ದೇಶದ ಇತರ ನಗರಗಳಲ್ಲಿಯೂ ಮುಂಬರುವ ದಿನಗಳಲ್ಲಿ ಎಸ್‌ಬಿಐ ಸ್ಟಾರ್ಟಪ್‌ಗಳಿಗೆ ವಿಶೇಷವಾಗಿ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಪ್ರತ್ಯೇಕ ಶಾಖೆಗಳನ್ನು ಎಸ್‌ಬಿಐ ತೆರೆಯಲಿದೆ ಎಂದು ಅಧ್ಯಕ್ಷ ದಿನೇಶ್ ಖರ ಅವರು ವಿವರಿಸಿದರು.