Site icon Vistara News

ಎಸ್‌ಬಿಐ ಗೃಹ ಸಾಲ ಬಡ್ಡಿ ದರ ಮತ್ತೆ ಹೆಚ್ಚಳ

sbi

SBI

ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಎಂಸಿಎಲ್‌ಆರ್‌ ಆಧಾರಿತ ಸಾಲಗಳ ಬಡ್ಡಿ ದರಗಳಲ್ಲಿ ಶೇ.0.10 ರಷ್ಟು ಹೆಚ್ಚಿಸಿದೆ. ಹೀಗಾಗಿ ಗೃಹ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಬಹುತೇಕ ಸಾಲಗಳ ಬಡ್ಡಿ ದರ ಏರಿಕೆಯಾಗಲಿದ್ದು, ಇಎಂಐ ಹೊರೆ ಹೆಚ್ಚಲಿದೆ.

ಎಸ್‌ಬಿಐ ಒಂದೇ ತಿಂಗಳಲ್ಲಿ ಎರಡನೇ ಸಲ ಸಾಲದ ಬಡ್ಡಿ ದರಗಳನ್ನು ಪರಿಷ್ಕರಿಸಿದಂತಾಗಿದೆ. ಇತರ ಬ್ಯಾಂಕ್‌ಗಳೂ ಇದನ್ನೇ ಅನುಸರಿಸುವ ನಿರೀಕ್ಷೆ ಇದೆ. ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ, 6 ತಿಂಗಳಿನ ಅವಧಿಯ ಎಂಸಿಎಲ್‌ಆರ್‌ ದರ ಶೇ.7.15 ಆಗಿದೆ. 1 ವರ್ಷದ ಅವಧಿಗೆ ಶೇ.7.20, 2 ವರ್ಷಗಳ ಅವಧಿಗೆ ಶೇ.7.40 ಮತ್ತು 3 ವರ್ಷಗಳ ಅವಧಿಗೆ ಶೇ.7.50 ಆಗಿದೆ.

ಗ್ರಾಹಕರ ಮೇಲೆ ಪರಿಣಾಮವೇನು?
ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ನಿಗದಿಪಡಿಸುವಾಗ ಎರಡು ವಿಧಗಳನ್ನು ಬಳಸುತ್ತವೆ. ಎಂಸಿಎಲ್‌ಆರ್‌ ಮತ್ತು ಆರ್‌ಎಲ್‌ಎಲ್‌ಆರ್.‌ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್‌ ಬೇಸ್ಡ್‌ ಲೆಂಡಿಂಗ್‌ ರೇಟ್‌ (ಎಂಸಿಎಲ್‌ಆರ್)‌ ಎಂಬುದು ಬ್ಯಾಂಕ್‌ಗೆ ಸಾಲ ನೀಡಲು ತಗಲುವ ವೆಚ್ಚವನ್ನು ಆಧರಿಸಿ ಬಡ್ಡಿ ದರ ನಿಗದಿಪಡಿಸುವ ವಿಧಾನವಾಗಿದೆ. ರೆಪೊ ಲಿಂಕ್ಡ್‌ ಲೋನ್‌ ರೇಟ್‌ (ಆರ್‌ಎಲ್‌ಎಲ್‌ಆರ್)‌ ಎಂಬುದು ಆರ್‌ಬಿಐನ ರೆಪೊ ದರವನ್ನು ಆಧರಿಸಿ ಸಾಲದ ಬಡ್ಡಿ ದರ ನಿಗದಿಪಡಿಸುವ ವಿಧಾನವಾಗಿದೆ. ಎಂಸಿಎಲ್‌ಆರ್‌ ಅಡಿಯಲ್ಲಿ ಗೃಹ ಸಾಲ ಸೇರಿದಂತೆ ಬಹುತೇಕ ಸಾಲಗಳು ಬರುವುದರಿಂದ ಅವುಗಳ ಬಡ್ಡಿ ದರ ಹೆಚ್ಚಲಿವೆ.ಗೃಹ ಸಾಲ, ವಾಹನ ಮತ್ತು ವೈಯಕ್ತಿಕ ಸಾಲಗಳ ಬಡ್ಡಿ ದರ ಹೆಚ್ಚಬಹುದು. ಕಾರ್ಪೊರೇಟ್‌ ಕಂಪನಿಗಳು ಪಡೆಯುವ ಸಾಲದ ಬಡ್ಡಿ ದರದಲ್ಲೂ ಏರಿಕೆಯಾಗಲಿದೆ.

ಬಡ್ಡಿ ದರ ಮತ್ತೆ ಹೆಚ್ಚಳ ಸಂಭವ
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೂನ್‌ನಲ್ಲಿ ಮತ್ತೆ ತನ್ನ ಬಡ್ಡಿ ದರಗಳನ್ನು (ರೆಪೊ) ಏರಿಸುವ ಸಾಧ್ಯತೆ ಇದೆ. ಆದರೆ ಎಷ್ಟರಮಟ್ಟಿಗೆ ಹೆಚ್ಚಳವಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ. ಪ್ರಸ್ತುತ ರೆಪೊ ದರ ಶೇ. 4.40 ಆಗಿದೆ. ಮೇನಲ್ಲಿ ರೆಪೊ ದರ ಪರಿಷ್ಕರಣೆಯಾಗಿತ್ತು.

ಕಳೆದ ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ 8 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ, ಅಂದರೆ ಶೇ.7.79ಕ್ಕೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಣದುಬ್ಬರ ತಗ್ಗಿಸಲು ಆರ್‌ ಬಿಐ ರೆಪೊ ದರ ಏರಿಕೆ ನಿರೀಕ್ಷಿತವಾಗಿದ್ದು, ಇದರ ಪರಿಣಾಮ ಬ್ಯಾಂಕ್‌ಗಳು ಬಡ್ಡಿ ದರ ಏರಿಸುವುದೂ ನಿಶ್ಚಿತ. ಹೀಗಾಗಿ ಜನತೆ ಬಡ್ಡಿ ದರ ಏರಿಕೆಯ ದಿನಗಳಿಗೆ ಸಜ್ಜಾಗಬೇಕಾಗಿದೆ.

ಇದನ್ನೂ ಓದಿ: ರೆಪೊ ದರಗಳ ಹೆಚ್ಚಳ: ಏರಲಿದೆ ನಿಮ್ಮ ಬಡ್ಡಿ

Exit mobile version