ನವ ದೆಹಲಿ: ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಎಂಸಿಎಲ್‌ಆರ್ ಆಧರಿತ (SBI Home loan interest) ಸಾಲಗಳ ಬಡ್ಡಿ ದರವನ್ನು 2022ರ ಡಿಸೆಂಬರ್ 15ರಿಂದ ಅನ್ವಯವಾಗುವಂತೆ ಏರಿಸಿದೆ.
ಎಸ್‌ಬಿಐ ವೆಬ್‌ಸೈಟ್ ಪ್ರಕಾರ 1-3 ತಿಂಗಳಿನ ಎಂಸಿಎಲ್‌ಆರ್ ದರವನ್ನು 7.75%ರಿಂದ 8%ಕ್ಕೆ ಏರಿಸಲಾಗಿದೆ. 6 ತಿಂಗಳಿನಿಂದ 1 ವರ್ಷ ಅವಧಿಯ ಎಂಸಿಎಲ್‌ಆರ್ ದರವನ್ನು 8.05%ರಿಂದ 8.30%ಕ್ಕೆ ಹೆಚ್ಚಿಸಲಾಗಿದೆ. ಬಹುತೇಕ ಗೃಹ, ವಾಹನ ಸಾಲಗಳು, ವೈಯಕ್ತಿಕ ಸಾಲಗಳು ಎಂಸಿಎಲ್‌ಆರ್ ಆಧರಿತವಾಗಿರುತ್ತವೆ. ಎರಡು ವರ್ಷ ಅವಧಿಯ ಎಂಸಿಎಲ್‌ಆರ್ ದರವನ್ನು 8.25%ರಿಂದ 8.50%ಕ್ಕೆ ಏರಿಸಲಾಗಿದೆ. ಮೂರು ವರ್ಷ ಅವಧಿಯ ಎಂಸಿಎಲ್‌ಆರ್ ದರವನ್ನು 8.35%ರಿಂದ 8.60%ಕ್ಕೆ ವೃದ್ಧಿಸಲಾಗಿದೆ.
ಎಸ್‌ಬಿಐ ಗೃಹ ಸಾಲದ ಕನಿಷ್ಠ ದರ 8.96%
ಎಂಸಿಎಲ್‌ಆರ್ ದರದ ಏರಿಕೆಯ ಬಳಿಕ ಎಸ್‌ಬಿಐ ಗೃಹ ಸಾಲದ ಕನಿಷ್ಠ ಬಡ್ಡಿ ದರವನ್ನು 8.90%ಕ್ಕೆ ವೃದ್ಧಿಸಿದೆ ಎಂದು ಬ್ಯಾಂಕ್‌ನ ವೆಬ್‌ಸೈಟ್ ತಿಳಿಸಿದೆ. ಇದಕ್ಕಾಗಿ ಗ್ರಾಹಕರ ಸಿಬಿಲ್ ಸ್ಕೋರ್ 800 ಅಥವಾ ಹೆಚ್ಚು ಇರಬೇಕು.
ಏನಿದು ಎಂಸಿಎಲ್‌ಆರ್?
ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಎಂಬುದು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುವ ಸಾಲದ ಬಡ್ಡಿ ದರ ನಿಗದಿಯ ಪದ್ಧತಿಗಳಲ್ಲೊಂದು. ಸಾಲ ವಿತರಣೆಗೆ ಬ್ಯಾಂಕಿಗೆ ತಗಲುವ ವೆಚ್ಚವನ್ನು ಇದು ಆಧರಿಸಿದೆ. ಆರ್‌ಬಿಐ 2016ರಲ್ಲಿ ಎಂಸಿಎಲ್‌ಆರ್ ಪದ್ಧತಿಯನ್ನು ಪರಿಚಯಿಸಿತ್ತು. ಬ್ಯಾಂಕಿನ ಸಾಲದ ಬಡ್ಡಿಗಳ ಕನಿಷ್ಠ ಬಡ್ಡಿ ದರವನ್ನು ನಿರ್ಣಯಿಸಲು ಇದು ಸಹಕಾರಿ. ಎಂಸಿಎಲ್‌ಆರ್ ದರ ಏರಿಕೆಯಿಂದ ತನ್ನಿಂತಾನೆ ಅದನ್ನು ಆಧರಿಸಿದ ಗೃಹ, ವಾಹನ, ಕಾರ್ಪೊರೇಟ್ ಸಾಲಗಳ ಬಡ್ಡಿ ದರ ಏರಿಕೆಯಾಗುತ್ತದೆ.