ನವ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಅದಾನಿ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಷೇರುಗಳ ಮೌಲ್ಯ ಕುಸಿತದ ಬಳಿಕವೂ ಎಲ್‌ಐಸಿ, ಎಸ್‌ಬಿಐಗೆ ಲಾಭವಾಗಿದೆ ಎಂದು ತಿಳಿಸಿದ್ದಾರೆ. ಅದಾನಿ ಗ್ರೂಪ್ ಷೇರುಗಳಲ್ಲಿ (Adani Group shares) ಎಸ್‌ಬಿಐ ಮತ್ತು ಎಲ್‌ಐಸಿಯ ಹೂಡಿಕೆಗಳು ನಿಗದಿಯ ಮಿತಿಯೊಳಗೆಯೇ ಇದ್ದು, ಈಗಲೂ ಲಾಭದಾಯಕವಾಗಿದೆ ಎಂದು ಹೇಳಿದ್ದಾರೆ. ಎಸ್‌ಬಿಐ ಮತ್ತು ಎಲ್‌ಐಸಿ ವಿವರವಾದ ಹೇಳಿಕೆಗಳನ್ನು ಬಿಡುಗಡೆಗೊಳಿಸಿವೆ. ಎಸ್‌ಬಿಐ ಮುಖ್ಯಸ್ಥರು ಕೂಡ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಇವತ್ತು ಅನುಕೂಲಕರ ಸ್ಥಿತಿಯಲ್ಲಿ ಇದೆ. ಬ್ಯಾಂಕ್‌ಗಳು ಸದೃಢವಾಗಿವೆ. ವಸೂಲಾಗದ ಸಾಲದ ಪ್ರಮಾಣ ಇಳಿಮುಖವಾಗುತ್ತಿದೆ. (ಎನ್‌ಪಿಎ) ಸಾಲ ಮರು ವಸೂಲಾತಿ ಚೇತರಿಸಿದೆ.
ಕೇಂದ್ರ ಬಜೆಟ್ ಸಮಾಜದ ಎಲ್ಲ ವಲಯಗಳನ್ನೂ ತಲುಪಿದೆ. ಆಯವ್ಯಯವನ್ನು ಸಾಕಷ್ಟು ಸಮಾಲೋಚನೆಗಳ ಬಳಿಕ ಸಿದ್ಧಪಡಿಸಲಾಗಿದೆ. ಇದಕ್ಕೆ ವ್ಯಾಪಕ ಸ್ವಾಗತ ಲಭಿಸಿದರೆ ನನಗೂ ಹೆಚ್ಚಿನ ಪ್ರೇರಣೆ ಸಿಕ್ಕಂತಾಗುತ್ತದೆ. ಮುಂಬರುವ ದಿನಗಳಲ್ಲಿ ಬಜೆಟ್ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ವಿಶ್ವಾಸ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.