Site icon Vistara News

SBI Report : ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ರಘುರಾಮ್‌ ರಾಜನ್‌ ಹೇಳಿಕೆ ಅಪ್ರಬುದ್ಧ ಎಂದು ಖಂಡಿಸಿದ ಎಸ್‌ಬಿಐ ವರದಿ

SBI

SBI hikes FD interest rates by up to 50 bps; check latest fixed deposit rates here

ನವ ದೆಹಲಿ: ಭಾರತವು ಹಿಂದೂ ಬೆಳವಣಿಗೆ ದರದ (Hindu rate of growth) ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಎಚ್ಚರಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯ ಮಂದಗತಿಯನ್ನು ಹಿಂದೂ ಬೆಳವಣಿಗೆ ದರ ಎಂಬ ಹಳೆಯ ಪರಿಕಲ್ಪನೆಯೊಂದಕ್ಕೆ ಹೋಲಿಸಿದ್ದಾರೆ. ಆದರೆ ರಘುರಾಮ್‌ ರಾಜನ್‌ ಅವರ ಈ ಹೇಳಿಕೆ ಅಪ್ರಬುದ್ಧ ಮತ್ತು ಪಕ್ಷಪಾತಿ ಧೋರಣೆಯದ್ದು (State Bank Of India) ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ( SBI Report ) ಖಂಡಿಸಿದೆ.

ಭಾರತದ ಇತ್ತೀಚಿನ ಆರ್ಥಿಕ ಬೆಳವಣಿಗೆಯ ಅಂಕಿ ಅಂಶಗಳನ್ನು ಆಧರಿಸಿ ಹಿಂದೂ ಬೆಳವಣಿಗೆ ದರಕ್ಕೆ ( Hindu rate of growth) ಹೋಲಿಸುವುದು ಅಪ್ರಬುದ್ಧ ಮತ್ತು ಬಾಲಿಶ ಎಂದು ಎಸ್‌ಬಿಐ ತಿಳಿಸಿದೆ.

ಎಸ್‌ಬಿಐ ತನ್ನ Ecowrap ವರದಿಯಲ್ಲಿ ಇತ್ತೀಚಿನ ತ್ರೈಮಾಸಿಕ ಜಿಡಿಪಿ ಅಂಕಿ ಅಂಶಗಳನ್ನು ಮತ್ರ ಪರಿಗಣಿಸಿ ರಘುರಾಮ್‌ ರಾಜನ್‌ ನೀಡಿರುವ ಹೇಳಿಕೆ ಅಪ್ರಬುದ್ಧವಾಗಿದೆ. ವಾಸ್ತವವಾಗಿ ಕಳೆದ ಮೂರು ವರ್ಷಗಳ ಪೈಕಿ 2022-23ರ ಕೊನೆಯ ವೇಳೆಗೆ ಜಿಡಿಪಿಯಲ್ಲಿ 2 ಲಕ್ಷ ಕೋಟಿ ರೂ.ಗಳ ಬೆಳವಣಿಗೆ ದಾಖಲಾಗಿದೆ ಎಂದು ಎಸ್‌ಬಿಐನ ಮುಖ್ಯ ಆರ್ಥಿಕ ತಜ್ಞ ಸೌಮ್ಯ ಕಾಂತಿ ಘೋಷ್‌ ತಿಳಿಸಿದ್ದಾರೆ.

ಸರ್ಕಾರದ ಬಂಡವಾಳ ಕ್ರೋಢೀಕರಣವು 2020-21 ಮತ್ತು 2021-22 ಅವಧಿಯಲ್ಲಿ 10.7%ರಿಂದ 11.8%ಕ್ಕೆ ಏರಿಕೆಯಾಗಿದೆ. ಖಾಸಗಿ ವಲಯದ ಹೂಡಿಕೆ 10%ರಿಂದ 10.8%ಕ್ಕೆ ಏರಿಕೆಯಾಗಿದೆ. ಉಳಿತಾಯದ ಪ್ರಮಾಣ 29%ರಿಂದ 30%ಕ್ಕೆ ವೃದ್ಧಿಸಿದೆ ಎಂದು ವರದಿ ತಿಳಿಸಿದೆ.

ಏನಿದು ಹಿಂದೂ ಬೆಳವಣಿಗೆ ದರ?

ಭಾರತವು 1950-1980ರ 30 ವರ್ಷಗಳಲ್ಲಿ ಅತ್ಯಲ್ಪ ಆರ್ಥಿಕ ಬೆಳವಣಿಗೆ ದರವನ್ನು ದಾಖಲಿಸಿತ್ತು. ಸರಾಸರಿ 4%ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆ ಆಗ ಉಂಟಾಗಿತ್ತು. 1978ರಲ್ಲಿ ಆರ್ಥಿಕ ತಜ್ಞ ರಾಜ್‌ ಕೃಷ್ಣ , ಈ ಹಿಂದೂ ರೇಟ್‌ ಆಫ್‌ ಗ್ರೋತ್‌ ಪದವನ್ನು ಬಳಸಿದರು. ಆಗ ಅವರು ದಿಲ್ಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಬೋಧಿಸುತ್ತಿದ್ದರು. ದೀರ್ಘಕಾಲೀನವಾಗಿ 3.5%ಕ್ಕಿಂತ ಕಡಿಮೆ ಜಿಸಿಪಿ ಬೆಳವಣಿಗೆ ದಾಖಲಾದರೆ ಹಿಂದೂ ಗ್ರೋತ್‌ ರೇಟ್‌ ಎಂದು ಕರೆಯುವ ಪರಿಪಾಠ ಉಂಟಾಗಿತ್ತು.

ಭಾರತ ಇತ್ತೀಚೆಗೆ 2022ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕ ಜಿಡಿಪಿ ಅಂಕಿ ಅಂಶಗಳನ್ನು ಪ್ರಕಟಿಸಿತ್ತು. ಅದರ ಪ್ರಕಾರ ಈ ಅವಧಿಯಲ್ಲಿ 4.4% ಕ್ಕೆ ಆರ್ಥಿಕ ಬೆಳವಣಿಗೆ ಇಳಿದಿತ್ತು.

ಆರ್ಥಿಕ ಬೆಳವಣಿಗೆ ನಿರಂತರ ಕುಸಿಯುತ್ತಿದೆ. ಖಾಸಗಿ ವಲಯದಲ್ಲಿ ಹೂಡಿಕೆ ಮುಗ್ಗರಿಸಿದೆ. ಆರ್‌ಬಿಐ ಈಗಲೂ ಬಡ್ಡಿ ದರ ಏರಿಸುತ್ತಿದೆ. ಜಾಗತಿಕ ಬೆಳವಣಿಗೆ ಈ ವರ್ಷವೂ ಮಂದಗತಿಯಲ್ಲಿ ಮುಂದುವರಿಯುವ ಲಕ್ಷಣ ಇದೆ. ಇದು ನನಗೆ ಆತಂಕ ತಂದಿದೆ ಎಂದು ರಘುರಾಮ್‌ ರಾಜನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಆರ್‌ ಬಿಐ ಪ್ರಸಕ್ತ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ 4.2% ರ ಬೆಳವಣಿಗೆ ನಿರೀಕ್ಷಿಸಿದೆ. ಮೂರು ವರ್ಷ ಹಿಂದೆ ಅಕ್ಟೋಬರ್-ಡಿಸೆಂಬರ್‌ ಜಿಡಿಪಿ ಬೆಳವಣಿಗೆ 3.7%ಕ್ಕೆ ಇಳಿದಿತ್ತು. ಈಗ ಅದೇ ಸನ್ನಿವೇಶ ಉಂಟಾಗಿದೆ ಎಂದು ಅವರು ವಿವರಿಸಿದ್ದಾರೆ.

Exit mobile version