ಮುಂಬೈ: ವಂಚನೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಮಂಗಳವಾರ ಸಿಎನ್‌ಬಿಸಿ ಅವಾಝ್‌ನ ಮಾಜಿ ಮಾರ್ಕೆಟ್ ಸಂಪಾದಕ, ನಿರೂಪಕ ಪ್ರದೀಪ್ ಪಾಂಡ್ಯ ಮತ್ತು ತಾಂತ್ರಿಕ ವಿಶ್ಲೇಷಕ ಅಲ್ಪೇಶ್ ಫುರಿಯಾ ಅವರಿಗೆ ತಲಾ 1 ಕೋಟಿ ರೂ.ಗಳ ದಂಡ ವಿಧಿಸಿದೆ (Sebi Fines). ಮಾತ್ರವಲ್ಲ ಇವರಿಬ್ಬರ ಜತೆಗೆ ಇತರ ಆರು ಘಟಕಗಳನ್ನು ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ. ಅಲ್ಪೇಶ್ ಫುರಿಯಾ (HUF), ಅಲ್ಪಾ ಫುರಿಯಾ, ಮನೀಶ್ ಫುರಿಯಾ, ಮನೀಶ್ ಫುರಿಯಾ (HUF), ಮಹಾನ್ ಇನ್ವೆಸ್ಟ್‌ಮೆಂಟ್ ಮತ್ತು ತೋಶೀ ಟ್ರೇಡ್‌ಗೆ ತಲಾ 10 ಲಕ್ಷ ರೂ. ದಂಡ ವಿಧಿಸಲಾಗಿದೆ.
ಸಿಎನ್‌ಬಿಸಿ ಅವಾಝ್ ಚಾನಲ್‌ನಲ್ಲಿ ಪ್ರದೀಪ್ ಪಾಂಡ್ಯ ಅಥವಾ ಅಲ್ಪೇಶ್ ಫುರಿಯಾ ನೀಡಿದ ಸ್ಟಾಕ್ ಶಿಫಾರಸುಗಳಿಗೆ ಅನುಗುಣವಾಗಿ ಅಲ್ಪೇಶ್ ಗ್ರೂಪ್ ಘಟಕಗಳು ಮೋಸದ ವಹಿವಾಟುಗಳನ್ನು ನಡೆಸಿದ್ದವು ಎಂದು ಮೂಲಗಳು ತಿಳಿಸಿದೆ.
“ವೈಯಕ್ತಿಕ ಲಾಭಕ್ಕಾಗಿ ಮಾಹಿತಿ ಮುಚ್ಚಿಟ್ಟುಕೊಂಡಿರುವುದು ಮತ್ತು ದುರುಪಯೋಗ ಪಡಿಸಿರುವುದು ತನಿಖೆ ವೇಳೆ ಕಂಡು ಬಂದಿದೆ” ಎಂದು ಸೆಬಿ ಹೇಳಿದೆ. “ಪ್ರಸ್ತುತ ಇದು ಕ್ಲಾಸಿಕಲ್ ಫ್ರಂಟ್ ರನ್ನಿಂಗ್ ಪ್ರಕರಣವನ್ನು ಹೋಲುತ್ತದೆʼʼ ಎಂದೂ ತಿಳಿಸಿದೆ.
ʼʼಪ್ರದೀಪ್ ಪಾಂಡ್ಯ, ಅಲ್ಪೇಶ್ ಫುರಿಯಾ ಮತ್ತು ಇತರ ಆರು ಸಂಸ್ಥೆಗಳು ಸೆಕ್ಯುರಿಟಿ ಮಾರುಕಟ್ಟೆಯನ್ನು ಪ್ರವೇಶಿಸದಂತೆ ಸೆಬಿ ನಿರ್ಬಂಧ ವಿಧಿಸಿದೆ ಮತ್ತು ಐದು ವರ್ಷಗಳ ಅವಧಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸೆಕ್ಯುರಿಟಿ ಖರೀದಿಸುವುದು, ಮಾರಾಟ ಮಾಡುವುದು ಅಥವಾ ವ್ಯವಹರಿಸುವುದನ್ನು ಅಥವಾ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದುವುದನ್ನು ನಿಷೇಧಿಸಿದೆʼʼ ಎಂದು ಮೂಲಗಳು ಹೇಳಿವೆ.
ಪ್ರದೀಪ್ ಪಾಂಡ್ಯ 2021ರ ಆಗಸ್ಟ್‌ವರೆಗೆ ಸಿಎನ್‌ಬಿಸಿ ಅವಾಝ್‌ನಲ್ಲಿ ವಿವಿಧ ಕಾರ್ಯಕ್ರಮಗಳ ನಿರೂಪಕ / ಸಹ-ನಿರೂಪಕರಾಗಿದ್ದರು. ಅಲ್ಪೇಶ್ ಫುರಿಯಾ ಚಾನಲ್‌ನಲ್ಲಿ ಅತಿಥಿ ತಜ್ಞರಾಗಿ ಕಾಣಿಸಿಕೊಂಡಿದ್ದರು ಮತ್ತು ಅವರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಟಾಕ್ ಶಿಫಾರಸು ಮಾಡುತ್ತಿದ್ದರು.
ಸೆಬಿ ಪ್ರಕಾರ, ಅಲ್ಪೇಶ್ ಫುರಿಯಾ ಮತ್ತು ಸಂಬಂಧಿತ ಖಾತೆಗಳು 10.73 ಕೋಟಿ ರೂ.ಗಳ ಕಾನೂನುಬಾಹಿರ ಲಾಭವನ್ನು ಗಳಿಸಿವೆ ಮತ್ತು ಇದರಲ್ಲಿ 8.4 ಕೋಟಿ ರೂ.ಗಳನ್ನು ಈಗಾಗಲೇ ಸೆಬಿ ಮುಟ್ಟುಗೋಲು ಹಾಕಿಕೊಂಡಿದೆ ಮತ್ತು ಈಗ ಉಳಿದ 2.34 ಕೋಟಿ ರೂ.ಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: SEBI : ಹೂಡಿಕೆದಾರರ ಪರ ಸೆಬಿ ಕೈಗೊಂಡ ಮಹತ್ವದ ನಿರ್ಧಾರಗಳು ಯಾವುದು?
“ಪ್ರದೀಪ್ ಪಾಂಡ್ಯ ಸಿಎನ್ಬಿಸಿ ಆವಾಝ್‌ನಲ್ಲಿ ನಿರೂಪಕರಾಗಿದ್ದಾಗ ಮುಂಬರುವ ಸ್ಟಾಕ್ ಶಿಫಾರಸುಗಳ ಬಗ್ಗೆ ಗೌಪ್ಯ ಮಾಹಿತಿಯನ್ನು ಅಲ್ಪೇಶ್ ಫುರಿಯಾ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಪೇಶ್ ಫುರಿಯಾ ಈ ವಿಶೇಷ ಮಾಹಿತಿಯನ್ನು ಬಂಡವಾಳ ಮಾಡಿಕೊಂಡು, ತಮ್ಮ ಸ್ವಂತ ಖಾತೆಗಳು ಮತ್ತು ಸಂಬಂಧಿತ ಸಂಸ್ಥೆಗಳ ಮೂಲಕ ವಹಿವಾಟುಗಳನ್ನು ನಿರ್ವಹಿಸಿದ್ದರು. ಈ ಶಿಫಾರಸುಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವ ಮೊದಲು ಲಾಭ ಗಳಿಸಿಕೊಂಡಿದ್ದರುʼʼ ಎಂದು ಸೆಬಿ ವರದಿಯಲ್ಲಿ ವಿವರಿಸಿದೆ.