ಅಹಮದಾಬಾದ್: ಭಾರತದ ವೇದಾಂತ ಮತ್ತು ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ಉತ್ಪಾದಕ ದಿಗ್ಗಜ ಫಾಕ್ಸ್‌ಕಾನ್, (Vedanta-Foxconn) ಗುಜರಾತ್‌ನ ಅಹಮದಾಬಾದ್ ಬಳಿಯ ಧೊಲೇರಾದಲ್ಲಿ ದೇಶದ ಮೊಟ್ಟ ಮೊದಲ ಸೆಮಿಕಂಡಕ್ಟರ್ ಘಟಕವನ್ನು ನಿರ್ಮಿಸಲು (Semiconductor) ಒಪ್ಪಂದವನ್ನು ಅಂತಿಮಪಡಿಸಿವೆ. ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಡೀಲ್ ಆಗಿದೆ. ಉಭಯ ಕಂಪನಿಗಳು ಒಟ್ಟು 1,54,000 ಕೋಟಿ ರೂ.ಗಳ ಬಂಡವಾಳವನ್ನು ಗುಜರಾತ್ ರಾಜ್ಯದಲ್ಲಿ ಇದಕ್ಕಾಗಿ ಹೂಡಿಕೆ ಮಾಡಲಿದೆ. ಕಳೆದ ವರ್ಷ ಯೋಜನೆಯನ್ನು ಘೋಷಿಸಿದ್ದರೂ, ಕಾರ್ಖಾನೆಯ ಸ್ಥಳ ಎಲ್ಲಿ ಎಂಬುದು ಅಂತಿಮವಾಗಿರಲಿಲ್ಲ.
ಗುಜರಾತ್ ಸರ್ಕಾರದ ಜತೆಗೆ ವಿವರವಾದ ಸಮಾಲೋಚನೆಯ ಬಳಿಕ ಉದ್ಯಮಿ ಅನಿಲ್ ಅಗ್ರವಾಲ್ ನೇತೃತ್ವದ ವೇದಾಂತ ಮತ್ತು ತೈವಾನ್ ಮೂಲದ ಫಾಕ್ಸ್‌ಕಾನ್, ಅಹಮದಾಬಾದ್ ಸಮೀಪದ ಧೊಲೇರಾ ಎಸ್‌ಐಆರ್ (Dholera Special Investment Region) ಅನ್ನು ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಸ್ಥಳವಾಗಿ ಆಯ್ಕೆ ಮಾಡಿಕೊಂಡಿವೆ.
1 ಲಕ್ಷ ಉದ್ಯೋಗ ಸೃಷ್ಟಿ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಗಾಂಧಿನಗರದಲ್ಲಿ ರೈಲ್ವೆ ಮತ್ತು ಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಮ್ಮುಖದಲ್ಲಿ ಎಂಒಯುಗೆ ಸಹಿ ಹಾಕಲಾಗಿತ್ತು. ಈ ಘಟಕದಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈ ಯೋಜನೆಗೆ ಅವಶ್ಯವಿರುವ ಎಲ್ಲ ಸಹಕಾರಗಳನ್ನು ನೀಡಲಿದೆ ಎಂದು ಪಟೇಲ್ ಹೇಳಿದ್ದಾರೆ.
ಧೊಲೇರಾ ಎಲ್ಲಿದೆ?
ಅಹಮದಾಬಾದ್‌ನಿಂದ 100 ಕಿ.ಮೀ ದೂರದಲ್ಲಿ ಧೊಲೇರಾ ಇದೆ. ಇಲ್ಲಿಯೇ ಮೆಗಾ ಸೆಮಿಕಂಡಕ್ಟರ್ ಘಟಕ ಅಸ್ತಿತ್ವಕ್ಕೆ ಬರಲಿದೆ. ಧೊಲೇರಾ ವಿಶೇಷ ಹೂಡಿಕೆ ವಲಯವನ್ನು (Dholera special investment region) ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದ ಅತ್ಯಂತ ಆಕರ್ಷಕ ಉತ್ಪಾದನೆ ಮತ್ತು ಉದ್ಯಮ ಅಭಿವೃದ್ಧಿ ತಾಣವಾಗಿ ಧೊಲೇರಾವನ್ನು ಮರು ನಿರ್ಮಾಣ ಮಾಡಲಾಗಿದೆ. ವಿಶೇಷ ಹೂಡಿಕೆ ವಲಯ ಕಾಯಿದೆ 2009 ಅಡಿಯಲ್ಲಿ ಇಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಧೊಲೇರಾ ವಿಶೇಷ ಹೂಡಿಕೆ ವಲಯ ಪ್ರಾಧಿಕಾರವನ್ನು ಅಸ್ತಿತ್ವಗೊಳಿಸಲಾಗಿದೆ. ಧೊಲೇರಾದಲ್ಲಿನ 920 ಚದರ ಕಿ.ಮೀ ಪ್ರದೇಶದಲ್ಲಿ 22 ಗ್ರಾಮಗಳನ್ನು ಒಳಗೊಂಡಂತೆ ಈ ಹೂಡಿಕೆ ವಲಯ ನಿರ್ಮಾಣವಾಗಿದೆ. ಕೈಗಾರಿಕಾ ನಗರಗಳಾದ ಅಹಮದಾಬಾದ್, ಬರೋಡಾ, ರಾಜ್‌ಕೋಟ್ ಮತ್ತು ಭಾವ್‌ನಗರ್‌ಗೆ ಸಮೀಪದ ಆಯಕಟ್ಟಿನ ಸ್ಥಳ ಇದಾಗಿದೆ. ಅಹಮದಾಬಾದ್‌ನಿಂದ ಇಲ್ಲಿಗೆ 6 ಲೇನ್ ಎಕ್ಸ್‌ಪ್ರೆಸ್ ವೇ, ಮೆಟ್ರೊ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಧೊಲೇರಾ ಭಾರತದ ಮೊದಲ ಪ್ಲಾಟಿನಮ್ ದರ್ಜೆಯ ಸ್ಮಾರ್ಟ್ ಸಿಟಿ ಆಗಿದೆ. ರಕ್ಷಣೆ, ವೈಮಾನಿಕ, ಎಲೆಕ್ಟ್ರಾನಿಕ್ಸ್, ಹೈಟೆಕ್ ಎಮರ್ಜಿಂಗ್ ಟೆಕ್ನಾಲಜೀಸ್, ಫಾರ್ಮಾಸ್ಯುಟಿಕಲ್ಸ್, ಜೈವಿಕ ತಂತ್ರಜ್ಞಾನ, ಆಟೊಮೊಬೈಲ್, ಆಟೊಮೊಬೈಲ್ ಬಿಡಿಭಾಗಗಳು, ಕೃಷಿ ಉತ್ಪನ್ನ ಸಂಸ್ಕರಣೆ ಇತ್ಯಾದಿ ವಲಯದ ಮೆಗಾ ಘಟಕಗಳನ್ನು ಸ್ಥಾಪಿಸಲು ಧೊಲೇರಾದಲ್ಲಿ ಸಮಗ್ರ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದು ಗುಜರಾತ್ ಸರ್ಕಾರ ತಿಳಿಸಿದೆ. ಒಟ್ಟು 8 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಧೊಲೇರಾ ವಿಶೇಷ ಹೂಡಿಕೆ ವಲಯ ಸೃಷ್ಟಿಸುವ ನಿರೀಕ್ಷೆ ಇದೆ.
ಸೆಮಿಕಂಡಕ್ಟರ್ ಯೋಜನೆಗೆ ಏನೆಲ್ಲ ನೆರವು ಸಿಗಲಿದೆ?
ಸೆಮಿಕಂಡಕ್ಟರ್ ಯೋಜನೆಗೆ ದೇಶದಲ್ಲಿಯೇ ಮೊದಲ ಬಾರಿಗೆ ಗುಜರಾತ್ ಸರ್ಕಾರ ಭಾರಿ ಉತ್ತೇಜನ ನೀಡಿದೆ. ಯೋಜನೆಗೆ ಮೊದಲ ಹಂತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಬೇಕಾಗುವ 200 ಎಕರೆ ಭೂಮಿಯಲ್ಲಿ 75% ಸಬ್ಸಿಡಿಯನ್ನು ನೀಡುತ್ತಿದೆ. ಮೊದಲ 5 ವರ್ಷದಲ್ಲಿ ಉತ್ತಮ ಗುಣಮಟ್ಟದ ನೀರನ್ನು ಕ್ಯೂಬಿಕ್ ಮೀಟರ್‌ಗೆ 12 ರೂ. ದರದಲ್ಲಿ ಒದಗಿಸಲಾಗುವುದು. ಕೈಗಾರಿಕಾ ಭೂಮಿಯ ವರ್ಗಾವಣೆಯಲ್ಲಿ 100% ಮುದ್ರಾಂಕ ಶುಲ್ಕ ರಿಫಂಡ್ ಸಿಗಲಿದೆ.