ಮುಂಬಯಿ: ಮಹಾರಾಷ್ಟ್ರದ ರಾಜ್ಯಪಾಲ ಬಿ.ಎಸ್ ಕೋಶ್ಯಾರಿ ಒಂದು ವೇಳೆ ಅಸೆಂಬ್ಲಿ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಶಿವಸೇನಾ ಸಿದ್ಧತೆ ನಡೆಸಿದೆ.
ವರದಿಗಳ ಪ್ರಕಾರ ಸ್ವತಂತ್ರ ಶಾಸಕರು ರಾಜ್ಯಪಾಲರನ್ನು ಸಮಪರ್ಕಿಸಿ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವುದಾಗಿ ತಿಳಿಸಲಿದ್ದಾರೆ. ಆಗ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಸಿಎಂ ಉದ್ಧವ್ ಠಾಕ್ರೆಗೆ ಸೂಚಿಸಬೇಕಾಗುತ್ತದೆ. ಸರ್ಕಾರ ಪತನವಾಗಲಿದೆ ಎಂಬುದು ಒಂದು ಲೆಕ್ಕಾಚಾರ. ಈ ಸ್ವತಂತ್ರ ಶಾಸಕರಿ ಎಂವಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬೆಂಬಲಿಸಿದ್ದರು.
ಸುಪ್ರೀಂ ಮೆಟ್ಟಿಲೇರಲಿದೆಯೇ ಸೇನಾ?
ಶಿನಸೇನಾ ಸಂಸದ ಅರವಿಂದ್ ಸಾವಂತ್ ಪ್ರಕಾರ, ಯಾರಾದರೂ ಬೆಂಬಲ ಹಿಂಪಡೆಯಲು ರಾಜ್ಯಪಾಲರನ್ನು ಸಂಪರ್ಕಿಸಿದ್ದಾರೆಯೇ ಎಂಬುದು ಅವರಿಗೆ ಗೊತ್ತಿಲ್ಲ. ಆದರೆ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಸೂಚಿಸಿದರೆ ಶಿವಸೇನಾ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಿದೆ.
ಸುಪ್ರೀಂಕೋರ್ಟ್ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿದೆ. ಆದ್ದರಿಂದ ಅವಿಶ್ವಾಸ ಗೊತ್ತುವಳಿ ಸೂಚನೆಗೆ ಸಂಬಂಧಿಸಿದ ಯಾವುದೇ ಆದೇಶಗಳನ್ನು ರಾಜ್ಯಪಾಲರು ಹೊರಡಿಸುವಂತಿಲ್ಲ ಎಂಬುದು ನಮ್ಮ ಅಭಿಮತ ಎಂದು ಅರವಿಂದ್ ಸಾವಂತ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡಲು ಸೂಚಿಸಿರುವುದರಿಂದ ರಾಜ್ ಭವನವು ಬಹುಮತ ಸಾಬೀತಿಗೆ ಸೂಚಿಸದು ಎಂದು ಅನ್ನಿಸುತ್ತಿದೆ ಎಂದು ಲೋಕೋಪಯೋಗಿ ಸಚಿವ ಅಶೋಕ್ ಚವ್ಹಾಣ್ ಹೇಳಿದ್ದಾರೆ.
” ಸುಪ್ರೀಂಕೋರ್ಟ್‌ನಲ್ಲಿ ಮೂರು ಪ್ರಮುಖ ವಿಷಯಗಳು ಇವೆ. ಪಕ್ಷದ ವಿಪ್ ಉಲ್ಲಂಘಿಸಿರುವ ಶಾಸಕರ ಅನರ್ಹತೆ ವಿಚಾರ, ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮತ್ತು ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಅಜಯ್ ಚೌಧುರಿ ನೇಮಕಾತಿಯ ವಿಷಯ ಸುಪ್ರೀಂ ಕೋರ್ಟ್ ಮುಂದಿದೆ. ಹೀಗಾಗಿ ರಾಜ್ ಭವನವು ಸಿಎಂಗೆ ಬಹುಮತ ಸಾಬೀತುಪಡಿಸಲು ಸೂಚಿಸಲಾರದುʼʼ ಎಂದು ಮಾಜಿ ಸಿಎಂ ಕೂಡ ಆಗಿರುವ ಅಶೋಕ್ ಚವ್ಹಾಣ್ ಹೇಳಿದ್ದಾರೆ.