Site icon Vistara News

ಹಿರಿಯ ಕೈಗಾರಿಕೋದ್ಯಮಿ, ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್‌ ಮುಖ್ಯಸ್ಥ ಪಲ್ಲೋನ್‌ಜಿ ಮಿಸ್ತ್ರಿ ನಿಧನ

pallonji

ಮುಂಬಯಿ: ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್‌ ಮುಖ್ಯಸ್ಥ ಪಲ್ಲೋನ್‌ಜಿ ಮಿಸ್ತ್ರಿ ನಿಧನರಾಗಿದ್ದಾರೆ. ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ನಿರ್ಮಾಣ ಕ್ಷೇತ್ರದಲ್ಲಿ ಪಲ್ಲೋನ್‌ಜಿ ಗ್ರೂಪ್‌ ಪ್ರಾಬಲ್ಯ ಸಾಧಿಸಿದೆ.

ಟಾಟಾ ಸಮೂಹದಲ್ಲಿ ೧೮.೪% ಷೇರುಗಳನ್ನು ಹೊಂದಿದ್ದ ಪಲ್ಲೋನ್‌ಜಿ ಮಿಸ್ತ್ರಿ ಅವರು ವೈಯಕ್ತಿಕವಾಗಿ ಅತಿ ದೊಡ್ಡ ಷೇರುದಾರರಾಗಿದ್ದರು. ದಕ್ಷಿಣ ಮುಂಬಯಿನಲ್ಲಿನ ನಿವಾಸದಲ್ಲಿ ಸೋಮವಾರ ಮಧ್ಯರಾತ್ರಿ ಅವರು ಕೊನೆಯುಸಿರೆಳೆದರು. ಮಿಸ್ತ್ರಿ ಮನೆತನ ೧೫೦ ವರ್ಷಗಳ ಹಿಂದೆಯೇ ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್‌ ಅನ್ನು ಸ್ಥಾಪಿಸಿತ್ತು. ೫೦ಕ್ಕೂ ಹೆಚ್ಚು ದೇಶಗಳಲ್ಲಿ ೫೦,೦೦೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ. ರಿಯಲ್‌ ಎಸ್ಟೇಟ್‌, ಜವಳಿ, ವಿದ್ಯುತ್‌, ಗೃಹೋಪಕರಣಗಳು, ಜೈವಿಕ ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳ ಉದ್ದಿಮೆಯಲ್ಲಿ ಸಮೂಹ ವಿಸ್ತರಿಸಿದೆ.

ಮುಂಬಯಿನಲ್ಲಿರುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಟ್ಟಡ, ಒಬೆರಾಯ್‌ ಹೋಟೆಲ್‌ ಅನ್ನು ಪಲ್ಲೋನ್‌ಜಿ ಗ್ರೂಪ್‌ ನಿರ್ಮಿಸಿತ್ತು. ಪಲ್ಲೋನ್‌ಜಿ ಮಿಸ್ತ್ರಿ ೨೯ ಶತಕೋಟಿ ಡಾಲರ್‌ (೨.೨೬ ಲಕ್ಷ ಕೋಟಿ ರೂ.) ಸಂಪತ್ತಿಗೆ ಒಡೆಯರಾಗಿದ್ದರು.

ಪಲ್ಲೋನ್‌ಜಿ ಅವರ ಪುತ್ರ ಸೈರಸ್‌ ಮಿಸ್ತ್ರಿ ೨೦೧೧ ನವೆಂಬರ್‌ನಿಂದ ೨೦೧೬ರ ಅಕ್ಟೋಬರ್‌ ತನಕ ಟಾಟಾ ಸನ್ಸ್‌ ಅಧ್ಯಕ್ಷರಾಗಿದ್ದರು. ಆದರೆ ಆಡಳಿತಾತ್ಮಕ ವಿವಾದಗಳಿಂದ ಸೈರಸ್‌ ಮಿಸ್ತ್ರಿ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಪಲ್ಲೋನ್‌ಜಿ ಅವರಿಗೆ ೨೦೧೬ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Exit mobile version