ಮುಂಬಯಿ: ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ (Sensex) ಇಂದು 262 ಅಂಕಗಳ ಕುಸಿತದೊಂದಿಗೆ 59456ಕ್ಕೆ ಮತ್ತು ನಿಫ್ಟಿ 97 ಅಂಕಗಳ ಇಳಿಕೆಯೊಂದಿಗೆ 17718ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಸೆನ್ಸೆಕ್ಸ್ 215 ಅಂಕಗಳ ಕುಸಿತದೊಂದಿಗೆ 59504 ಕ್ಕೆ ಪ್ರಾರಂಭಗೊಂಡರೆ, ನಿಫ್ಟಿ 49 ಅಂಕಗಳ ಇಳಿಕೆಯೊಂದಿಗೆ 17766ಕ್ಕೆ ವಹಿವಾಟು ಆರಂಭಗೊಂಡಿತು. ಬ್ಯಾಂಕ್ ನಿಫ್ಟಿ ಸಹ 264 ಅಂಕಗಳ ಕುಸಿತದಿಂದ 41203ರಲ್ಲಿ ದಿನವನ್ನು ಅಂತ್ಯಗೊಳಿಸಿತು.
ಮೊದಲ ಎರಡು ಗಂಟೆ ಅವಧಿಯಲ್ಲಿ ಮಾರುಕಟ್ಟೆ ಹೆಚ್ಚು ಏರಿಳಿತಗಳನ್ನು ದಾಖಲಿಸಿತು ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರ ಉಕ್ರೆನ್ ಯುದ್ದವನ್ನು ಮುಂದುವರಿಸುವ ಇಂಗಿತದ ಕಾರಣದಿಂದ ಮಾರುಕಟ್ಟೆಯಲ್ಲಿ ಇನ್ನೂ ಗಲಿಬಿಲಿ ಉಂಟಾಗಿ ಹೆಚ್ಚು ಮಾರಾಟದ ಒತ್ತಡ ಕಂಡುಬಂದಿತು. ಸಣ್ಣ ಮತ್ತು ಮಧ್ಯಮ ಸೂಚಂಕ್ಯಗಳು ಇಳಿಕೆ ಕಂಡವು.
ಎಫ್ಎಂಸಿಜಿ ವಲಯ ಮಾತ್ರ ಏರಿಕೆ ಕಂಡರೆ, ಲೋಹ, ಔಷಧ, ಇಂಧನ, ಮೂಲಸೌಕರ್ಯ ಅಭಿವೃಧ್ದಿ, ಸರಕು ವಲಯದ ಷೇರುಗಳು ಭಾರಿ ಇಳಿಕೆ ಕಂಡವು. ಅದಾನಿ ಕಂಪನಿಯು ಎಸಿಸಿ ಮತ್ತು ಅಂಬುಜಾ ಸಿಮೆಂಟ್ ಕಂಪನಿಗಳ ಎಲ್ಲಾ ಷೇರುಗಳನ್ನು ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದರಿಂದ ಮಾರಾಟದ ಒತ್ತಡಕ್ಕೆ ಒಳಗಾಯಿತು. ರಷ್ಯಾದ ಯುದ್ದದ ಭೀತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ, ನೈಸರ್ಗಿಕ ಅನಿಲ, ಬಂಗಾರ ಮತ್ತು ಬೆಳ್ಳಿಯ ದರಗಳು ಏರಿಳಿತ ಕಾಣುತ್ತಿವೆ.
ಫೆಡರಲ್ ಬ್ಯಾಂಕ್ ಬಡ್ಡಿದರ
ಇಂದು ಮಧ್ಯರಾತ್ರಿ ಅಮೇರಿಕಾದ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಿಸಲಿದ್ದು, ಶೇ.0.75 ರಷ್ಟು ಏರಿಕೆಯನ್ನು ಮಾರುಕಟ್ಟೆ ಈಗಾಗಲೇ ನಿರೀಕ್ಷಿಸಿದೆ. ಬ್ಯಾಂಕ್ ಶೇ. 1ರಷ್ಟು ಹೆಚ್ಚು ಮಾಡಿದರೆ ಷೇರುಪೇಟೆಯ ಮೇಲೆ ನಕಾರಾತ್ಮಕ ಪರಿಣಾಮ ನಿರೀಕ್ಷಿಸಬಹುದಾಗಿದೆ. ಶೇ.0.75 ರಷ್ಟು ಏರಿಸಿದರರೂ ಬ್ಯಾಂಕ್ ಅಧ್ಯಕ್ಷ ಜರೋಮ್ ಪೌಲ್ ಭಾಷಣದಲ್ಲಿ ಮುಂದಿನ ನಡೆಯ ಬಗ್ಗೆ ಏನು ಹೇಳುತ್ತಾರೆ, ಇದರಿಂದ ಅಮೇರಿಕಾದ ಬೆಳವಣಿಗೆ ಮತ್ತು ಮುಂದಿನ ಸಲ ಏಷ್ಟು ಬಡ್ಡಿದರ ಏರಿಕೆ ಕಾಣಬಹುದು ಎಂಬ ಸೂಚನೆಗಳು ಸಿಗಬಹುದು ಎಂದು ಜಗತ್ತು ಕೂತುಹಲದಿಂದ ಕಾಯುತ್ತಿದೆ. ಈ ವಿದ್ಯಮಾನದ ನಂತರ ನಾಳೆ ಭಾರತದ ಷೇರುಪೇಟೆಯ ವಹಿವಾಟು ನಿರ್ಧರಿತವಾಗಲಿದೆ. ನಾಳೆ ಫ್ಯೂಚರ್ ಅಂಡ್ ಆಪ್ಷನ್ ಮಾರುಕಟ್ಟೆಯ ವಾರಂತ್ಯವಾಗಿದ್ದರಿಂದ ಹೆಚ್ಚು ಏರಿಳಿತ ಕಾಣಬಹುದು.
ರೂಪಾಯಿ ಮೌಲ್ಯ
ಜಾಗತಿಕ ವಿದ್ಯಮಾನಗಳ ಒತ್ತಡ ಭಾರತದ ರೂಪಾಯಿ ಮೇಲೆ ಪ್ರಭಾವ ಬೀರಿದ್ದು, ಅಮೆರಿಕಾದ ಡಾಲರ್ ಎದುರು ಪುನಃ 80 ರೂಗಳ ಸನಿಹಕ್ಕೆ ಬಂದು ನಿಂತಿದೆ. ರೂಪಾಯಿ ಅಪಮೌಲ್ಯ ಭಾರತದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.