ಮುಂಬಯಿ: ಅದಾನಿ ಕಂಪನಿಗಳ ಷೇರುಗಳ ಬಿಕ್ಕಟ್ಟಿನಿಂದ ಈಗತಾನೆ ಚೇತರಿಸಿಕೊಳ್ಳುತ್ತಿರುವ ಭಾರತೀಯ ಷೇರು ಮಾರುಕಟ್ಟೆಗೆ ಇದೀಗ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (silicon valley bank) ಮತ್ತು ಸಿಗ್ನೇಚರ್ ಬ್ಯಾಂಕ್ ದಿವಾಳಿಯಾಗಿರುವ ಘಟನೆ ಪ್ರತಿಕೂಲ ಪರಿಣಾಮ ಬೀರಿದೆ. ಕಳೆದ ಎರಡು ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ 2110 ಅಂಕಗಳನ್ನು ಕಳೆದುಕೊಂಡಿದೆ. ಸೆನ್ಸೆಕ್ಸ್ ಕುಸಿತಕ್ಕೆ ಕಾರಣವೇನು ಎಂಬುದನ್ನು ನೋಡೋಣ.
ಅಮೆರಿಕದಲ್ಲಿ ಸ್ಟಾರ್ಟಪ್‌ಗಳಿಗೆ ಸಾಲ ಕೊಡುತ್ತಿದ್ದ ಎಸ್‌ವಿಬಿ ಮತ್ತು ಸಿಗ್ನೇಚರ್ ಬ್ಯಾಂಕ್ ದಿವಾಳಿಯಾಗಿರುವುದು ನಕಾರಾತ್ಮಕ ಪ್ರಭಾವ ಬೀರಿತು. ಏಷ್ಯಾದಲ್ಲೂ ಷೇರು ಸೂಚ್ಯಂಕಗಳು ಕೆಲ ದಿನಗಳಿಂದ ಮುಗ್ಗರಿಸಿವೆ. ಬ್ಯಾಂಕಿಂಗ್ ಷೇರುಗಳು ವ್ಯಾಪಕವಾಗಿ ಮಾರಾಟವಾಯಿತು. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಸಲಿದೆಯೇ ಎಂಬ ಆತಂಕವೂ ಹೂಡಿಕೆದಾರರನ್ನು ಕಾಡುತ್ತಿದೆ.
ಬಿಎಸ್ ಇ ಸೆನ್ಸೆಕ್ಸ್ ಸೋಮವಾರ 897 ಅಂಕ ಕುಸಿತಕ್ಕೀಡಾಗಿದ್ದು, 58,237ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 258 ಅಂಕ ಕುಸಿದಿದ್ದು, 17,154ಕ್ಕೆ ಸ್ಥಿರವಾಯಿತು.