ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex fall) ಶುಕ್ರವಾರ ಬೆಳಗ್ಗೆ 400 ಅಂಕ ಕುಸಿತಕ್ಕೀಡಾಯಿತು. ಬಹುತೇಕ ಎಲ್ಲ ವಲಯಗಳ ಷೇರುಗಳು ನಷ್ಟ ಅನುಭವಿಸಿತು. ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳು ಹೆಚ್ಚು ನಷ್ಟಕ್ಕೀಡಾಯಿತು. ಮಧ್ಯಾಹ್ನ ಸೆನ್ಸೆಕ್ಸ್ 270 ಅಂಕ ನಷ್ಟದಲ್ಲಿ 61,528ರಲ್ಲಿ ಹಾಗೂ ನಿಫ್ಟಿ 84 ಅಂಕ ಕಳೆದುಕೊಂಡು 18,336ಕ್ಕೆ ವಹಿವಾಟು ನಡೆಸುತ್ತಿತ್ತು.
ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಷೇರು ಮಾರುಕಟ್ಟೆಯಲ್ಲಿ ರಿಟೇಲ್, ಐಟಿ ಷೇರುಗಳು ಕುಸಿತಕ್ಕೀಡಾಯಿತು. ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರ ಏರಿಸಿದ ಬೆನ್ನಲ್ಲೇ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಐರೋಪ್ಯ ಸೆಂಟ್ರಲ್ ಬ್ಯಾಂಕ್ ಕೂಡ ತಲಾ ಅರ್ಧ ಪರ್ಸೆಂಟ್‌ನಷ್ಟು ಬಡ್ಡಿ ದರ ಏರಿಸಿವೆ.
ಐಟಿ ಷೇರುಗಳ ಕುಸಿತ ಏಕೆ?
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳು ಅಮೆರಿಕದ ಮಾರುಕಟ್ಟೆಯಲ್ಲಿನ ಆಗುಹೋಗುಗಳಿಗೆ ಸೂಕ್ಷ್ಮ ಸಂವೇದಿಯಾಗಿವೆ. ಅಮೆರಿಕದ ಮಾರುಕಟ್ಟೆಯಲ್ಲಿ ಐಟಿ ಷೇರುಗಳು ನಿರ್ಣಾಯಕವಾಗಿವೆ. ಹೀಗಾಗಿ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಮತ್ತು ಆರ್ಥಿಕ ಹಿಂಜರಿತದ ಭೀತಿ ಈ ವಲಯವನ್ನು ಹೆಚ್ಚು ಕಾಡುತ್ತಿದೆ. ಪರಿಣಾಮ ಷೇರು ದರಗಳು ಕುಸಿದಿವೆ. ಶುಕ್ರವಾರ ಮಧ್ಯಾಹ್ನ ಟಿಸಿಎಸ್ ಷೇರು ದರ 3,268 ರೂ, ವಿಪ್ರೊ 393 ರೂ, ಎಚ್‌ಸಿಎಲ್ 1,039 ರೂ.ಗಳಲ್ಲಿ ವಹಿವಾಟು ನಡೆಸುತ್ತಿತ್ತು. ಷೇರುಗಳ ದರ ಕುಸಿತದ ಸಂದರ್ಭ ಅವುಗಳನ್ನು ಖರೀದಿಸಲು ಅವಕಾಶ ಸೃಷ್ಟಿಯಾಗುತ್ತದೆ.