ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ೬೦,೦೦೦ ಅಂಕಗಳ ದಾಖಲೆಯ (Sensex @60K) ಎತ್ತರವನ್ನು ಮತ್ತೆ ಗಳಿಸಿದೆ. ಕಳೆದ ಏಪ್ರಿಲ್ ೫ರ ಬಳಿಕ ಕುಸಿದಿದ್ದ ಸೂಚ್ಯಂಕ ಇದೀಗ ಮತ್ತೆ ೬೦ ಸಾವಿರ ಅಂಕಗಳ ಗಡಿಯನ್ನು ದಾಟಿದೆ.
ಸೆನ್ಸೆಕ್ಸ್ ಬುಧವಾರ ಬೆಳಗ್ಗೆ ೧೦.೨೨ರ ವೇಳೆಗೆ ೬೦,೧೩೧ ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು. ಅಂದರೆ ೨೮೯ ಅಂಕಗಳ ಜಿಗಿತ ದಾಖಲಿಸಿತ್ತು. ನಿಫ್ಟಿ ೮೫ ಅಂಕ ಏರಿಕೊಂಡು ೧೭,೯೧೧ ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.
ಸೆನ್ಸೆಕ್ಸ್ ಷೇರುಗಳ ಪೈಕಿ ಎನ್‌ಟಿಪಿಸಿ, ಹಿಂದೂಸ್ತಾನ್ ಯುನಿಲಿವರ್, ಅಲ್ಟ್ರಾ ಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಎಲ್&ಟಿ, ಇಂಡಸ್‌ಇಂಡ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಷೇರುಗಳು ಏರಿಕೆ ದಾಖಲಿಸಿತು. ಟಿಸಿಎಸ್, ಇನ್ಫೋಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಬೆಳಗ್ಗಿನ ವಹಿವಾಟಿನಲ್ಲಿ ನಷ್ಟಕ್ಕೀಡಾಗಿವೆ.
ಭಾರತದಲ್ಲಿ ಹಣದುಬ್ಬರ ಇಳಿಕೆಯ ಹಾದಿಯಲ್ಲಿರುವುದು ಷೇರು ಮಾರುಕಟ್ಟೆಯ ಮೇಲೆ ಸಕಾರತ್ಮಕ ಪ್ರಭಾವ ಬೀರಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಹೂಡಿಕೆ ಮಾಡುತ್ತಿದ್ದಾರೆ.