ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ( Sensex @63,000) ಮೊಟ್ಟ ಮೊದಲ ಬಾರಿಗೆ 63,099 ಅಂಕಗಳ ದಾಖಲೆಯ ಉನ್ನತ ಮಟ್ಟದಲ್ಲಿ ದಿನದ ವಹಿವಾಟನ್ನು ಬುಧವಾರ ಮುಕ್ತಾಯಗೊಳಿಸಿತು.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 417 ಅಂಕ ಏರಿಕೆಯಾಗಿ 63,099ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 140 ಅಂಕ ಗಳಿಸಿ 18,758ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೇರಿವೆ. ಜಾಗತಿಕ ಷೇರು ಮಾರುಕಟ್ಟೆಯ ಮಂದಗತಿಯ ಹೊರತಾಗಿಯೂ ಹೆಚ್ಚಳ ದಾಖಲಿಸಿವೆ. ನಿಫ್ಟಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಮ್ಮ ಸಾರ್ವಕಾಲಿಕ ಎತ್ತರಕ್ಕಿಂತ ಈಗಲೂ ಕೆಳಗಿದ್ದರೂ, ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರುಗತಿಯ ಟ್ರೆಂಡ್‌ನಲ್ಲಿ ಇವೆ ಎಂದು ಸ್ವಸ್ತಿಕಾ ಇನ್ವೆಸ್ಟ್‌ಮೆಂಟ್‌ನ ಆರ್ಥಿಕ ತಜ್ಞ ಸಂತೋಷ್ ಮೀನಾ ತಿಳಿಸಿದ್ದಾರೆ.
ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರು ಆರ್ಥಿಕತೆ ಬಗ್ಗೆ ನಾಳೆ ಮಾತನಾಡಲಿದ್ದಾರೆ. ಭಾರತದ ಎರಡನೇ ತ್ರೈಮಾಸಿಕದ ಜಿಡಿಪಿ ಅಂಕಿ ಅಂಶಗಳು ಇಂದು ಪ್ರಕಟವಾಗಲಿದೆ. ಇವೆರಡೂ ವಿದ್ಯಮಾನಗಳು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಪಿಎಸ್‌ಯು ಬ್ಯಾಂಕ್ ಹೊರತುಪಡಿಸಿ ಉಳಿದ ಎಲ್ಲ ವಲಯಗಳಲ್ಲಿ ಇಂದು ಷೇರುಗಳ ಭರ್ಜರಿ ಖರೀದಿ ನಡೆಯಿತು.
ಸೆನ್ಸೆಕ್ಸ್ ದಾಖಲೆ ಜಿಗಿತಕ್ಕೆ ಕಾರಣಗಳು:
ಜಾಗತಿಕ ಆರ್ಥಿಕ ಹಿಂಜರಿತದ ಆತಂಕ ಇದ್ದರೂ, ಭಾರತದ ಯುವ ಜನತೆ ಷೇರು ಮಾರುಕಟ್ಟೆ ಯಲ್ಲಿ ಹೂಡಿಕೆಯನ್ನು ದಿನೇ ದಿನೆ ಹೆಚ್ಚಿಸುತ್ತಿದ್ದಾರೆ. ನೇರವಾಗಿ ಷೇರುಗಳಲ್ಲಿ ಹಾಗೂ ಮ್ಯೂಚುವಲ್ ಫಂಡ್ ಗಳ ಮೂಲಕ ಹೂಡಿಕೆ ಹೆಚ್ಚಳವಾಗುತ್ತಿದೆ.
ರಷ್ಯಾ- ಉಕ್ರೇನ್ ಸಂಘರ್ಷದ ಆರಂಭದಲ್ಲಿ ಹೂಡಿಕೆ ಹಿಂತೆಗೆದುಕೊಂಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಮತ್ತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡುತ್ತಿದ್ದಾರೆ.
ಹಣದುಬ್ಬರದ ಪ್ರಮಾಣ ಮುಂಬರುವ ದಿನಗಳಲ್ಲಿ ಕಡಿಮೆಯಾಗುವ ಹಾಗೂ ಬ್ಯಾಂಕುಗಳಲ್ಲಿ ಬಡ್ಡಿದರ ಏರಿಕೆಯ ಪ್ರಮಾಣ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಉಂಟಾಗಿರುವುದು.
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಮುಂದಿನ ಹಂತದಲ್ಲಿ ಗಣನೀಯ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಕಡಿಮೆಯಾಗಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ. ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಿದರೆ , ಭಾರತದಂಥ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆಯ ಹೊರ ಹರಿವು ಹೆಚ್ಚಳವಾಗಿ ಷೇರು ಸೂಚ್ಯಂಕ ಕುಸಿಯುತ್ತದೆ. ಆದರೆ ಅಂಥ ಸಾಧ್ಯತೆ ಕ್ಷೀಣಿಸಿದೆ.
ಜಾಗತಿಕ ಷೇರು ಮಾರುಕಟ್ಟೆ ಕೂಡ ಚೇತರಿಸಿದೆ.
ಕಚ್ಚಾ ತೈಲ ದರಗಳು ಇಳಿಯುತ್ತಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ.