ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಮಂಗಳವಾರ ಬೆಳಗ್ಗೆ 700 ಕ್ಕೂ ಹೆಚ್ಚು ಅಂಕ ಜಿಗಿಯಿತು.
ಷೇರು ಹೂಡಿಕೆದಾರರಿಗೆ 2.22 ಲಕ್ಷ ಕೋಟಿ ರೂ. ಗಳಿಕೆಯಾಗಿಯಿತು. ಬಿಎಸ್‌ಇನಲ್ಲಿ ನೋಂದಾಯಿತ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯ 273.96 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು. ಬೆಳಗ್ಗೆ 11.20ರ ವೇಳೆಗೆ ಸೆನ್ಸೆಕ್ಸ್ 58,953 ಅಂಕಗಳ ಮಟ್ಟದಲ್ಲಿತ್ತು.
ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವೇನು?
ಬ್ರಿಟನ್‌ನಲ್ಲಿ ಸಿರಿವಂತರಿಗೆ ಆದಾಯ ತೆರಿಗೆಯಲ್ಲಿ 45% ಕಡಿತಗೊಳಿಸುವ ವಿವಾದಾತ್ಮಕ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಹೂಡಿಕೆದಾರರು ಉತ್ಸಾಹದಿಂದ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿಸಿದರು. ಜಾಗತಿಕ ಷೇರುಪೇಟೆಯಲ್ಲೂ ಸೂಚ್ಯಂಕಗಳು ವೃದ್ಧಿಸಿತು.
ಏಷ್ಯಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಚೇತರಿಸಿತು. ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ವಲಯದ ಕಂಪನಿಗಳು ಉತ್ತಮ ಫಲಿತಾಂಶವನ್ನು ಸಾಧಿಸುತ್ತಿವೆ. ಕಳೆದ ಕೆಲವು ದಿನಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯ ಹಿಂತೆಗೆತವನ್ನು ಕಡಿಮೆ ಮಾಡಿದ್ದಾರೆ.