ಮುಂಬಯಿ: ಸತತ ನಾಲ್ಕು ದಿನಗಳ ಕುಸಿತದ ಬಳಿಕ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 721 ಅಂಕ ಜಿಗಿದು 60,566ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 207 ಅಂಕ ಕಳೆದುಕೊಂಡು 18,014ಕ್ಕೆ ಸ್ಥಿರವಾಯಿತು. (Sensex jump) ಹೂಡಿಕೆದಾರರಿಗೆ 5.8 ಲಕ್ಷ ಕೋಟಿ ರೂ.ಗಳ ಲಾಭ ಉಂಟಾಯಿತು.
ಔಷಧ ಮತ್ತು ಹೆಲ್ತ್ ಕೇರ್ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಷೇರುಗಳ ಭರ್ಜರಿ ಖರೀದಿ ಕಂಡು ಬಂದಿತು. ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿತ ಕಂಪನಿಗಳ ಷೇರುಗಳ ಒಟ್ಟು ಮೌಲ್ಯದಲ್ಲಿ 5.8 ಲಕ್ಷ ಕೋಟಿ ರೂ.ಗಳ ಏರಿಕೆ ಉಂಟಾಯಿತು. ಒಟ್ಟು ಮೌಲ್ಯ 277 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು.
ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಟಾಟಾ ಸ್ಟೀಲ್, ಐಟಿಸಿ, ಎಕ್ಸಿಸ್ ಬ್ಯಾಂಕ್ ವ್ಯಾಪಕ ಲಾಭ ಗಳಿಸಿತು. ಎಚ್‌ಡಿಎಫ್‌ಸಿ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್ ಕೂಡ ಉತ್ತಮ ಲಾಭ ಗಳಿಸಿತು. ಮತ್ತೊಂದು ಕಡೆ ನೆಸ್ಲೆ, ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್, ಎಚ್‌ಯುಎಲ್, ಸನ್ ಫಾರ್ಮಾ ನಷ್ಟಕ್ಕೀಡಾಯಿತು.
ಸಾಂತಾ ರ‍್ಯಾಲಿ (ಕ್ರಿಸ್ ಮಸ್ ಸುತ್ತಮುತ್ತ ಸಾಮಾನ್ಯವಾಗಿ ಸಂಭವಿಸುವ ಸೂಚ್ಯಂಕ ಜಿಗಿತ), ಜಾಗತಿಕ ಷೇರು ಮಾರುಕಟ್ಟೆಗಳ ಸಕಾರಾತ್ಮಕ ವಹಿವಾಟು, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಉತ್ಸಾಹದ ಖರೀದಿ ಭರಾಟೆ ಸೂಚ್ಯಂಕ ಜಿಗಿತಕ್ಕೆ ಕಾರಣವಾಯಿತು.