ಮುಂಬಯಿ: ಜಾಗತಿಕ ಮಾರುಕಟ್ಟೆಯ ತಲ್ಲಣಗಳು ಭಾರತದ ಷೇರುಪೇಟೆ ಮೇಲೂ ಪ್ರಭಾವ ಬೀರಿದ್ದರಿಂದ ಸತತವಾಗಿ ನಾಲ್ಕನೇ ದಿನವಾದ ಬುಧವಾರ ಸೆನಕ್ಸ್ 509 ಅಂಕಗಳ ಇಳಿಕೆ ಕಂಡಿತು. (Sensex crash) ನಿಫ್ಟಿ ಸೂಚ್ಯಂಕ 148 ಅಂಕಗಳ ಕುಸಿತ ದಾಖಲಿಸಿತು.
ಸೆನಕ್ಸ್ ಇಂದು 397 ಅಂಕಗಳ ಇಳಿಕೆಯೊಂದಿಗೆ 56710 ಅಂಕಗಳಿಗೆ ಪ್ರಾರಂಭವಾದರೆ, ನಿಫ್ಟಿ 136 ಅಂಕಗಳ ಕುಸಿತದೊಂದಿಗೆ 16870ಕ್ಕೆ ವಹಿವಾಟು ಆರಂಭವಾಯಿತು. ಬ್ಯಾಂಕ್ ನಿಫ್ಟಿ ಸಹ 277 ಅಂಕಗಳ ಇಳಿಕೆಯೊಂದಿಗೆ 38081 ಕ್ಕೆ ಆರಂಭಗೊಂಡು ದಿನದ ಅಂತ್ಯಕ್ಕೆ 599 ಅಂಕಗಳ ಕುಸಿತದೊಂದಿಗೆ 37759 ಅಂಕಗಳಿಗೆ ಮುಕ್ತಾಯಗೊಂಡಿತು.
ಬೆಳಿಗ್ಗೆ ಕುಸಿತದೊಂದಿಗೆ ಮಾರುಕಟ್ಟೆ ಪ್ರಾರಂಭವಾದರೂ ಒಂದರೆಡು ಗಂಟೆಯೊಳಗೆ ಸಂಪೂರ್ಣವಾಗಿ ಪುಟಿದೆದ್ದಿತು. ನಂತರ ಏರಿಳಿಕೆಯೊಂದಿಗೆ ವಹಿವಾಟು ನಡೆಯಿತು. ಮಧ್ಯಾಹ್ನ 1.30ರ ನಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಭಾರಿ ಮಾರಾಟದ ಒತ್ತಡದಿಂದ ಮಾರುಕಟ್ಟೆ ಸತತವಾಗಿ ಇಳಿಕೆ ಕಂಡಿತು. ಇಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2772 ಕೋಟಿ ರೂ. ಷೇರುಗಳನ್ನು ಮಾರಾಟ ಮಾಡಿದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 2544 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೊಂಡುಕೊಂಡರು.
ಇಂದು ಮಾರುಕಟ್ಟೆಗೆ ಬೆಂಬಲವಾಗಿ ನಿಂತಿದ್ದು ಔಷಧ ಮತ್ತು ಐಟಿ ವಲಯದ ಷೇರುಗಳು. ತೈಲ ಮತ್ತು ಅನಿಲ, ಬ್ಯಾಂಕಿಂಗ್, ಲೋಹ, ಸರಕು, ಇಂಧನ, ಮಾಧ್ಯಮ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.
ರೂಪಾಯಿ ಸಾರ್ವಕಾಲಿಕ ಇಳಿಕೆ
ಭಾರತದ ರೂಪಾಯಿ ಅಮೇರಿಕಾದ ಡಾಲರ್ ಎದುರು ಇಂದೂ ಸಹ ಸಾರ್ವಕಾಲಿಕ ಕುಸಿತ ಕಂಡು 81.94ರಲ್ಲಿ ವಹಿವಾಟು ನಡೆಸುತ್ತಿದೆ. ಡಾಲರ್ ಎದುರು ಜಗತ್ತಿನ ಬಹುತೇಕ ಕರೆನ್ಸಿಗಳು ಭಾರಿ ಕುಸಿತವನ್ನು ದಾಖಲಿಸುತ್ತಿವೆ.
ಲೋಹ, ಸರಕು ಮತ್ತು ಅಡುಗೆ ತೈಲ ಅಗ್ಗ
ಅಮೇರಿಕಾ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸೂಚನೆಗಳು ಕಾಣುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಲೋಹ , ಸರಕು ಮತ್ತು ಅಡುಗೆ ತೈಲದ ದರಗಳು ಶೇ. 10 ರಿಂದ 30 ವರೆಗೆ ಕುಸಿತಕೊಂಡಿವೆ. ಇದು ಸಹ ಭಾರತದ ಮಾರುಕಟ್ಟೆ ಕುಸಿತಕ್ಕೆ ಒಂದು ಕಾರಣವಾಗಿದೆ.