ಮುಂಬಯಿ: ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತದ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಮಧ್ಯಂತರ ವಹಿವಾಟಿನಲ್ಲಿ 1000 ಕ್ಕೂ ಹೆಚ್ಚು ಅಂಕಗಳ ಇಳಿಕೆ ದಾಖಲಿಸಿತು. ಎನ್‌ಎಸ್‌ಸಿ ಸೂಚ್ಯಂಕ ನಿಫ್ಟಿ 19,434 ಅಂಕಗಳ ಕುಸಿತಕ್ಕೀಡಾಯಿತು. ( Sensex crash) ಅಮೆರಿಕ, ಯುರೋಪ್ ಮತ್ತು ಚೀನಾದಲ್ಲಿ ಎಕಾನಮಿ ಕುರಿತ ದುರ್ಬಲ ಅಂಕಿ ಅಂಶಗಳು ಭಾರತೀಯ ಷೇರು ಪೇಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಮಧ್ಯಾಹ್ನ 2.18 ರ ವೇಳೆಗೆ ಸೆನ್ಸೆಕ್ಸ್ 1000 ಅಂಕ ನಷ್ಟದಲ್ಲಿ 65,454 ರ ಮಟ್ಟದಲ್ಲಿತ್ತು. ನಿಫ್ಟಿ 305 ಅಂಕ ನಷ್ಟಕ್ಕೀಡಾಗಿ 19,428 ರ ಮಟ್ಟದಲ್ಲಿತ್ತು.
ಸೆನ್ಸೆಕ್ಸ್ ಕುಸಿತಕ್ಕೆ ಕಾರಣವೇನು? ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ ಅಮೆರಿಕದ ಕ್ರೆಡಿಟ್ ಗ್ರೇಡ್ ಅನ್ನು (credit grade) AAA ಯಿಂದ AA+ ಮಟ್ಟಕ್ಕೆ ಇಳಿಸಿದೆ. ಇದು ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ನಿಫ್ಟಿ 19,500 ರ ಸಪೋರ್ಟ್ ಲೆವೆಲ್‌ಗಿಂತ ಕೆಳಕ್ಕಿಳಿಯಿತು. ಹೀಗಾಗಿ ನಿಫ್ಟಿ 20,000 ಅಂಕಗಳ ಗಡಿಯನ್ನು ಶೀಘ್ರ ದಾಟಲಿದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ನಿರಾಸೆ ಆಗಿದೆ. ಫಿಚ್ ರೇಟಿಂಗ್ಸ್ ಅಮೆರಿಕದ ರೇಟಿಂಗ್ ಅನ್ನು ಮಂಗಳವಾರ ಇಳಿಸಿದ ಬಳಿಕ ಬಾಂಡ್ ಮತ್ತು ಕರೆನ್ಸಿ ಮಾರ್ಕೆಟ್ ಮೇಲೆ ಪ್ರಭಾವ ಬೀರಿತು.
ಹೀಗಾಗಿ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅಂತಾರಾಷ್ಟ್ರೀಯ ಸೂಚ್ಯಂಕಗಳ ಕುಸಿತ ಯಾವ ಪರಿಣಾಮ ಬೀರಲಿದೆ ಎಂಬ ಜಿಜ್ಞಾಸೆ ಉಂಟಾಗಿದೆ. ಸೆನ್ಸೆಕ್ಸ್ ಸ್ಟಾಕ್ಸ್‌ಗಳ ಪೈಕಿ ಟಾಟಾ ಸ್ಟೀಲ್, ಎಲ್&ಟಿ, ಜೆಎಸ್‌ಡಬ್ಲ್ಯು ಸ್ಟೀಲ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಟಾಟಾ ಮೋಟಾರ್ಸ್ ಷೇರು ದರ ಇಳಿಯಿತು. ಹೀರೊ ಮೊಟೊ ಕಾರ್ಪ್ ಷೇರು ದರ 3% ಇಳಿಯಿತು. ವಲಯಾವಾರು ಲೆಕ್ಕದಲ್ಲಿ ಲೋಹ ವಲಯ 0.95% ತಗ್ಗಿತು.
ಅಮೆರಿಕ, ಯುರೋಪ್, ಏಷ್ಯಾದ್ಯಂತ ಷೇರು ಮಾರುಕಟ್ಟೆ ಬುಧವಾರ ಮುಗ್ಗರಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign institutional investors-FII) 92.85 ಕೋಟಿ ರೂ. ಮೌಲ್ಯದ ಷೇರುಗಳನ್ನು ಬುಧವಾರ ಮಾರಾಟ ಮಾಡಿದರು. ಇದೇ ವೇಳೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (domestic institutional investors) 1,036 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬುಧವಾರ 1% ಏರಿಕೆ ದಾಖಲಿಸಿತು. ಕಳೆದ ಏಪ್ರಿಲ್ ನಂತರ ಗರಿಷ್ಠ ಮಟ್ಟ ತಲುಪಿತು. ಅಮೆರಿಕದಿಂದ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ದರ ಹೆಚ್ಚಳವಾಯಿತು. ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 82.13 ಡಾಲರ್‌ಗೆ ಏರಿತು. ಫೊರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 18 ಪೈಸೆ ಇಳಿದು 82.40 ರೂ. ನಷ್ಟಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2023-24ರಲ್ಲಿ ಇದುವರೆಗೆ 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುವ ಪ್ರವೃತ್ತಿಯೂ ಕಂಡು ಬರುತ್ತಿದೆ. ಹೂಡಿಕೆದಾರರು ಕೆಲ ಪ್ರಾಫಿಟ್ ಬುಕಿಂಗ್ (profit booking) ಮಾಡುತ್ತಿದ್ದಾರೆ.