Site icon Vistara News

ಸೆನ್ಸೆಕ್ಸ್‌ 1,400 ಅಂಕಗಳ ಭಾರಿ ಕುಸಿತ, LIC ಷೇರು ದರ 700 ರೂ.ಗಿಂತ ಕೆಳಕ್ಕೆ ಪತನ

sensex crash

ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆ ಸೋಮವಾರ ಅಲ್ಲೋಲಕಲ್ಲೋಲವಾಗಿದ್ದು, ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬೆಳಗ್ಗಿನ ವಹಿವಾಟಿನಲ್ಲಿ 1,400 ಅಂಕಗಳನ್ನು ಕಳೆದುಕೊಂಡು ತತ್ತರಿಸಿತು.

ಸೆನ್ಸೆಕ್ಸ್‌ ಬೆಳಗ್ಗೆ 10 ಗಂಟೆಯ ವೇಳೆಗೆ 1,488 ಅಂಕ ಕಳೆದುಕೊಂಡು 52,781ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 432 ಅಂಕ ಕಳೆದುಕೊಂಡು 15,769ರಲ್ಲಿತ್ತು.

ಅಮೆರಿಕದಲ್ಲಿ ಕಳೆದ ಮೇನಲ್ಲಿ ಹಣದುಬ್ಬರ 8.6%ಕ್ಕೆ ಜಿಗಿದಿದ್ದು, ಕಳೆದ 40 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಅಂಕಿ ಅಂಶಗಳು ಜಾಗತಿಕ ಷೇರು ಮಾರುಕಟ್ಟೆಯನ್ನು ಅಯೋಮಯಗೊಳಿಸಿತು.

ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಿಸಲು ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರಗಳನ್ನು ಮತ್ತಷ್ಟು ಏರಿಸಲಿದೆ ಎಂಬ ಭೀತಿಯಿಂದ ಷೇರು ಪೇಟೆ ಮುಗ್ಗರಿಸಿತು.

ಚೀನಾದ ಬೀಜಿಂಗ್‌ನಲ್ಲಿ ಕೋವಿಡ್‌ ಅಲೆ ಮತ್ತೆ ಮರುಕಳಿಸಿರುವುದು ಕೂಡ ನಕಾರಾತ್ಮಕ ಪ್ರಭಾವ ಬೀರಿತು. ಏಷ್ಯಾದ ಷೇರು ಸೂಚ್ಯಂಕಗಳು 2.7% ಕುಸಿಯಿತು.

ಎಲ್‌ಐಸಿ ಷೇರು ದರ ಪತನ

ಎಲ್‌ಐಸಿ ಷೇರು ದರ ಸೋಮವಾರ ಬೆಳಗ್ಗೆ ಮೊದಲ ಬಾರಿಗೆ 700 ರೂ.ಗಿಂತಲೂ ಕೆಳಕ್ಕಿಳಿಯಿತು. 10 ಗಂಟೆಯ ವೇಳೆಗೆ 681 ರೂ.ಗೆ ಪತನವಾಯಿತು. ಐಪಿಒ ದರಕ್ಕಿಂತ 28% ಕೆಳಕ್ಕಿಳಿದಿದೆ. ಎಲ್‌ಐಸಿಯ ಷೇರು ಮಾರುಕಟ್ಟೆ ಮೌಲ್ಯ 4,34,052 ಕೋಟಿ ರೂ.ಗೆ ಇಳಿಕೆಯಾಗಿದೆ. ಐಪಿಒ ದರ 949 ರೂ. ಇತ್ತು.

ಆಂಕರ್‌ ಹೂಡಿಕೆದಾರರಿಗೆ 30 ದಿನಗಳ ಲಾಕ್‌ ಇನ್‌ ಅವಧಿ ಸೋಮವಾರ ಮುಕ್ತಾಯವಾಗುತ್ತಿದೆ. ಇದರೊಂದಿಗೆ ಆಂಕರ್‌ ಹೂಡಿಕೆದಾರರು ತಾವು ಹೊಂದಿರುವ ಎಲ್‌ಐಸಿ ಷೇರುಗಳನ್ನು ಮಾರಾಟ ಮಾಡಬಹುದು.

Exit mobile version