ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿತು. ಸೂಚ್ಯಂಕವು 762 ಅಂಕ ಏರಿಕೊಂಡು 62,272ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಸೆನ್ಸೆಕ್ಸ್ ಮತ್ತು ನಿಫ್ಟಿಯ ದಿನದ ಮುಕ್ತಾಯದ ಅಂಕ ಕೂಡ ದಾಖಲೆ ಸೃಷ್ಟಿಸಿತು. (Sensex creates history) ಸೆನ್ಸೆಕ್ಸ್ ೨೦೨೧ರ ಅಕ್ಟೋಬರ್ 19ರಂದು 62,245ಕ್ಕೆ ಏರಿತ್ತು.
ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 216 ಅಂಕ ಏರಿಕೆಯಾಗಿ, 18,484ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು.
2.76 ಲಕ್ಷ ಕೋಟಿ ರೂ. ಹೂಡಿಕೆದಾರರ ಮೌಲ್ಯ ಹೆಚ್ಚಳ
ಜಾಗತಿಕ ಮಾರುಕಟ್ಟೆಯ ಪ್ರಭಾವ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಬೆಂಬಲದಿಂದ ಷೇರುಪೇಟೆ ಇಂದು ಭಾರಿ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆಯನ್ನು ದಾಖಲಿಸಿದೆ. ನಿಫ್ಟಿ, ಸೆನ್ಸೆಕ್ಸ್ ಮತ್ತು ಬ್ಯಾಂಕ್ ನಿಫ್ಟಿ 2021 ರ ಅಕ್ಟೋಬರ್ ನಂತರ ಸಾರ್ವಕಾಲಿಕ ಮುಕ್ತಾಯವಾಗಿದೆ. ಇಂದು ಹೂಡಿಕೆದಾರರ ಹಣದ ಮೌಲ್ಯ 2.76 ಲಕ್ಷ ಕೋಟಿ ರೂ ವೃದ್ಧಿಸಿದೆ.
ಏಷ್ಯಾದ ಹಲವು ದೇಶಗಳ ಷೇರುಪೇಟೆ ಸಕಾರಾತ್ಮಕ ವಹಿವಾಟು ನಡೆಸಿದ್ದರ ಪರಿಣಾಮ ನಿಫ್ಟಿ ಇಂದು 59 ಅಂಕಗಳ ಏರಿಕೆಯೊಂದಿಗೆ 18326 ಕ್ಕೆ ಆರಂಭವಾಯಿತು. ಸೆನ್ಸೆಕ್ಸ್ 146 ಅಂಶಗಳ ಹೆಚ್ಚಳದೊಂದಿಗೆ 61656 ಕ್ಕೆ ಮತ್ತು ಬ್ಯಾಂಕ್ ನಿಫ್ಟಿ 109 ಅಂಕಗಳ ಅಧಿಕದೊಂದಿಗೆ 42838 ಕ್ಕೆ ಪ್ರಾರಂಭವಾಯಿತು.
ಪ್ರಾರಂಭದಿಂದಲೂ ಏರಿಕೆಯನ್ನು ಸತತವಾಗಿ ಕಾಯ್ದುಕೊಂಡ ಮಾರುಕಟ್ಟೆ ದಿನದ ಕೊನೆಯ ಭಾಗದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಭಾರಿ ಬೇಡಿಕೆಯ ಪರಿಣಾಮ ಸಾರ್ವಕಾಲಿಕ ಏರಿಕೆಯನ್ನು ದಾಖಲಿಸಿಲು ಕಾರಣವಾಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ದರ 85 ಡಾಲರಗೆ ಇಳಿಕೆ, ಡಾಲರ್ ಎದುರು ರೂಪಾಯಿ ತನ್ನ ಮೌಲ್ಯವನ್ನು ವೃದ್ಧಿಸಿಕೊಂಡಿರುವುದು ಮತ್ತು ಅಮೇರಿಕಾದ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳವನ್ನು ಕಡಿಮೆ ಪ್ರಮಾಣದಲ್ಲಿ ಮಾಡಬಹುದು ಎಂಬ ಸೂಚನೆಗಳು ಸಿಗುತ್ತಿರುವುದರಿಂದ ಹೂಡಿಕೆದಾರರಲ್ಲಿ ಹೆಚ್ಚು ಉತ್ಸಾಹ ಕಂಡುಬಂದಿದೆ. ಜೊತೆಗೆ ಆಪ್ಷನ್ ಮತ್ತು ಪ್ಯೂಚರ್ ಮಾರುಕಟ್ಟೆಯ ವಾರದ ಮತ್ತು ತಿಂಗಳ ವಾಯಿದೆ ದಿನವಾಗಿದ್ದರಿಂದ ಅಲ್ಪಾವಧಿ ಹೂಡಿಕೆದಾರರು ಶಾರ್ಟ್ ಕವರಿಂಗ್ ಗೆ ಮುಂದಾಗಿರುವುದು ಮಾರುಕಟ್ಟೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ.
ದಿನದ ಅಂತ್ಯಕ್ಕೆ ನಿಫ್ಟಿ 216 ಅಂಕಗಳ ಅಧಿಕದೊಂದಿಗೆ 18484 ಕ್ಕೆ ವಹಿವಾಟು ಪೂರ್ಣಗೊಳಿಸಿದೆ, ನಿಫ್ಟಿ ಸಾರ್ವಕಾಲಿಕ ಏರಿಕೆಯಿಂದ ಕೇವಲ 100 ಅಂಕಗಳ ದೂರದಲ್ಲಿದೆ. ಸೆನ್ಸೆಕ್ಸ್ 762 ಅಂಶಗಳ ಏರಿಕೆಯೊಂದಿಗೆ 62272 ಕ್ಕೆ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 346 ಅಂಕಗಳ ಹೆಚ್ಚಳದೊಂದಿಗೆ 43075 ಕ್ಕೆ ಅಂತ್ಯಗೊಂಡಿದೆ.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.51 ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.52 ರಷ್ಟು ಹೆಚ್ಚಳವಾಗಿದೆ. ಐಟಿ, ಬ್ಯಾಂಕಿಂಗ್, ಇನ್ಪ್ರಾ ಸೇರಿದಂತೆ ಎಲ್ಲ ಸೂಚ್ಯಂಕಗಳು ಏರಿಕೆಯಾಗಿವೆ.
ಸತತವಾಗಿ ಮಾರಾಟ ಮಾಡುತ್ತಿದ್ದ ವಿದೇಶಿ ಹೂಡಿಕೆದಾರರು ಇಂದು 1231 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 235 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.