ಮುಂಬಯಿ: ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ವಹಿವಾಟಿನ ಪ್ರಭಾವ ಮತ್ತು ಜಾಗತಿಕ ಹೂಡಿಕೆದಾರರ ಮಾರಾಟ ಒತ್ತಡದಿಂದ ಸೆನೆಕ್ಸ್ ಇಂದು 953 ಅಂಕಗಳ ಕುಸಿತದೊಂದಿಗೆ 57145 ವಹಿವಾಟು ಪೂರ್ಣಗೊಳಿಸಿತು. ನಿಫ್ಟಿ ಸಹ 311 ಅಂಕಗಳ ಇಳಿಕೆಯೊಂದಿಗೆ 17016 ರಲ್ಲಿ ಮುಕ್ತಾಯಗೊಂಡಿತು, ಇನ್ನೊಂದು ಪ್ರಮುಖ ಸೂಚ್ಯಂಕವಾದ ಬ್ಯಾಂಕ್ ನಿಫ್ಟಿ ಸಹ 930 ಅಂಕಗಳ ಕುಸಿತದೊಂದಿಗೆ 38616ರಲ್ಲಿ ಮುಕ್ತಾಯಗೊಂಡಿತು. ಜಾಗತಿಕ ಹೂಡಿಕೆದಾರರು ಇಂದು 5000 ಕೋಟಿಗಿಂತಲೂ ಹೆಚ್ಚು ಷೇರುಗಳನ್ನು ಮಾರಾಟ ಮಾಡಿದರು. ಆದರೆ ದೇಶಿಯ ಹೂಡಿಕೆದಾರರು 3000 ಕೋಟಿ ರೂ.ಗಳ ಷೇರುಗಳನ್ನು ಕೊಂಡುಕೊಂಡಿದ್ದಾರೆ.
ಸತತ ನಾಲ್ಕು ದಿನಗಳಿಂದ ಷೇರುಪೇಟೆ ನಕಾರಾತ್ಮಕ ವಹಿವಾಟು ನಡೆಸುತ್ತಿದ್ದು, ಶುಕ್ರವಾರ ಸಹ ಭಾರಿ ಇಳಿಕೆ ಕಂಡಿತ್ತು. ಇದೇ ವ್ಯವಹಾರವನ್ನು ಮುಂದುವರಿಸಿಕೊಂಡು ಬೆಳಿಗ್ಗೆ ಸೆನಕ್ಸ್ 573 ಇಳಿಕೆಯೊಂದಿಗೆ 57525 ಅಂಕಗಳಿಗೆ ವಹಿವಾಟು ಆರಂಭಿಸಿದರೆ, ನಿಫ್ಟಿ 170 ಅಂಶಗಳ ಕುಸಿತದೊಂದಿಗೆ 17156 ಅಂಕಗಳೊಂದಿಗೆ ಪ್ರಾರಂಭವಾಯಿತು. ಷೇರುಪೇಟೆ ಪ್ರಾರಂಭವಾದ ಮೊದಲ 5 ನಿಮಿಷದಲ್ಲೇ ಪೇಟೆ ಭಾರಿ ಕುಸಿತ ದಾಖಲಿಸಿತು. ಒಂದು ಹಂತದಲ್ಲಿ ನಿಫ್ಟಿ ಪ್ರಮುಖ ಘಟ್ಟವಾದ 17000 ಅಂಕಗಳಿಗಿಂತಲೂ ಕೆಳಗೆ ವಹಿವಾಟು ನಡೆಸಿ 200 ದಿನಗಳ ಮೂವಿಂಗ್ ಆವರೆಜನಲ್ಲಿ ಬೆಂಬಲ ಪಡೆದು 150 ಅಂಕಗಳಿಗಿಂತಲೂ ಹೆಚ್ಚು ಪುಟಿದಿದ್ದೆತು. ಮಧ್ಯಾಹ್ನದ ನಂತರ ಜಾಗತಿಕ ಹೂಡಿಕೆದಾರರು ಪುನಃ ಭಾರಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಭಾರಿ ಇಳಿಕೆ ಕಂಡು 17000 ಸನಿಹ ವಹಿವಾಟು ಮುಕ್ತಾಯಗಿಳಿಸಿತು.
ಸಣ್ಣ (ಶೇ. 3.02) ಮತ್ತು ಮಧ್ಯಮ (ಶೇ. 3.41) ಕ್ಷೇತ್ರದ ಸೂಚ್ಯಂಗಳು ಕುಸಿತಕಂಡವು. ಷೇರುಪೇಟೆಯ ಏರಿಳತವನ್ನು ಸೂಚಿಸುವ ಇಂಡಿಯಾ ವಿಕ್ಸ್ ಸಹ ಶೇ. 6.31 ರಷ್ಟು ಏರಿಕೆಯನ್ನು ದಾಖಲಿಸಿತು. ಇದರ ಜೊತೆಗೆ ಬ್ಯಾಂಕಿಂಗ್, ವಾಹನೋಧ್ಯಮ, ಲೋಹ, ಮಾಧ್ಯಮ, ಇಂಧನ ಮತ್ತು ಗ್ಯಾಸ್ ಕ್ಷೇತ್ರದ ಷೇರುಗಳು ಭಾರಿ ಇಳಿಕೆ ಕಂಡವು.
ರೂಪಾಯಿ ಸಾರ್ವಕಾಲಿಕ ಇಳಿಕೆ :
ಇಂದು ಷೇರುಪೇಟೆಗೆ ಸಕಾರಾತ್ಮವಾಗಿ ಬೆಂಬಲ ನೀಡಿದ್ದು ಕೇವಲ ಐಟಿ ಕಂಪನಿಗಳ ಷೇರುಗಳು. ಭಾರತದ ರೂಪಾಯಿ ಅಮೇರಿಕಾದ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡು 81.61 ರಲ್ಲಿ ವಹಿವಾಟು ನಡೆಸಿದ್ದು ಐಟಿ ಕಂಪನಿಗಳ ಲಾಭಾಂಶ ಹೆಚ್ಚಾಗಲು ನೆರವಾಗುತ್ತಿರುವುದಂರಿಂದ ಐಟಿ ಕಂಪನಿಗಳು ಸಕಾರಾತ್ಮಕ ವಹಿವಾಟು ನಡೆಸಿದವು. ಅಮೇರಿಕಾದ ಡಾಲರ್ ಎದುರು ಜಗತ್ತಿನ ಬಹುತೇಕ ಕರೆನ್ಸಿಗಳು ಭಾರಿ ಕುಸಿತವನ್ನು ಕಂಡಿವೆ.
ಕಚ್ಚಾತೈಲ ಇಳಿಕೆ : ಭಾರತಕ್ಕೆ ವರದಾನ
ಕಳೆದ ಮೂರುದಿನಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದರಗಳು ಭಾರಿ ಇಳಿಕೆ ದಾಖಲಿಸುತ್ತಿವೆ. ಅಮೇರಿಕಾ ಸೇರಿಂದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಆರ್ಥಿಕ ಹಿಂಜರಿಕೆಯತ್ತ ಜಾರುತ್ತಿರುವುದರಿಂದ ಕಚ್ಚಾತೈಲಕ್ಕೆ ಬೇಡಿಕೆ ಕಡಿಮೆಯಾಗುತ್ತದೆ, ಆದ್ದರಿಂದ ಕಚ್ಚಾತೈಲದ ದರಗಳು ಇಳಿಕೆ ಕಾಣುತ್ತಿದ್ದು, ಜೊತೆಗೆ ಲೋಹ ಮತ್ತು ಸರಕಗಳು ಬೆಲೆಗಳು ಸಹ ಕುಸಿತ ಕಾಣುತ್ತಿವೆ. ಇದರಿಂದ ಭಾರತದ ಸೇರಿದಂತೆ ಅಭಿವೃಧ್ಧಿ ಶೀಲ ರಾಷ್ಟ್ರಗಳಿಗೆ ಅನುಕೂಲಕರ ವಾತಾವರಣ ಸೃಷ್ಠಿಯಾಗುತ್ತಿದೆ. ಕಚ್ಚಾತೈಲ ದರ ಇಳಿಕೆಯಿಂದ ಕಚ್ಚಾತೈಲವನ್ನು ಮೂಲ ಸರಕಾಗಿ ಉಪಯೋಗಿಸುವ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ.
ಹರ್ಷ ಇಂಜಿನಿಯರಿಂಗ್ ಐಪಿಓ
ಕಳೆದ ವಾರ ಬಹು ಬೇಡಿಕೆ ಕಂಡಿದ್ದ ಹರ್ಷ ಇಂಜನಿಯರಿಂಗ್ ಐಪಿಓ ಇಂದು ಶೇ. 35ರಷ್ಟು ಹೆಚ್ಚಿನ ಬೆಲೆಯೊಂದಿಗೆ ವಹಿವಾಟು ಆರಂಭಿಸಿತು. ಷೇರುಪೇಟೆ ಭಾರಿ ಇಳಿಕೆ ಕಾಣುತ್ತಿದ್ದರೂ ಐಪಿಓಗಳಿಗೆ ಭಾರಿ ಬೇಡಿಕೆ ಇರುವುದು ಸಕಾರಾತ್ಮಕ ಅಂಶವನ್ನು ಸೂಚಿಸುತ್ತಿದೆ.