Site icon Vistara News

Stock market : ಸೆನ್ಸೆಕ್ಸ್‌ 1,032 ಅಂಕ ಪತನ, ಅದಾನಿ ಕಂಪನಿಗಳ ಷೇರು 20% ಕುಸಿತ, ಹಿಂಡೆನ್‌ಬರ್ಗ್‌ ಎಫೆಕ್ಟ್?

stock trader

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ ಬೆಳಗ್ಗೆ 1,034 ಅಂಕ ಕುಸಿತಕ್ಕೀಡಾಗಿದ್ದು, ಅದಾನಿ ಗ್ರೂಪ್‌ ಕಂಪನಿಗಳ ಷೇರು ದರ 20%ಕ್ಕೂ ಹೆಚ್ಚು ನಷ್ಟಕ್ಕೀಡಾಯಿತು. (Stock market) ಹೂಡಿಕೆದಾರರಿಗೆ 8.1 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಯಿತು. ಬಿಎಸ್‌ಇ ನೋಂದಾಯಿತ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 2,76,495 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಬ್ಯಾಂಕ್‌ ಷೇರುಗಳು ನಿಫ್ಟಿ ಬ್ಯಾಂಕ್‌ ಇಂಡೆಕ್ಸ್‌ನಲ್ಲಿ ಅತಿ ಹಚ್ಚು ನಷ್ಟಕ್ಕೀಡಾಯಿತು. ಹಾಗಾದರೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಲು ಕಾರಣವೇನು?

ಹಿಂಡೆನ್‌ಬರ್ಗ್‌ ಎಫೆಕ್ಟ್?‌

ಅಮೆರಿಕ ಮೂಲದ ಹಿಂಡೆನ್‌ಬರ್ಗ್‌ ಸಂಸ್ಥೆಯು ಅದಾನಿ ಗ್ರೂಪ್‌ ವಿರುದ್ಧ ಅವ್ಯವಹಾರಗಳ ವರದಿಯನ್ನು ಪ್ರಕಟಿಸಿದ ಬಳಿಕ, ಸಮೂಹದ 10 ಕಂಪನಿಗಳ ಷೇರುಗಳ ದರಗಳು ಕುಸಿಯಿತು. ಅದಾನಿ ಟೋಟಲ್‌ ಗ್ಯಾಸ್‌ ಷೇರು ದರ 20% ಇಳಿಕೆ ದಾಖಲಿಸಿತು. ಅದಾನಿ ಪವರ್‌ (5%), ಅದಾನಿ ವಿಲ್ಮರ್‌ (5%), ಎನ್‌ಡಿಟಿವಿ (5%) ಷೇರುಗಳು ನಷ್ಟಕ್ಕೀಡಾಯಿತು.

ಬ್ಯಾಂಕ್‌ ಷೇರುಗಳ ಮೇಲೆ ಒತ್ತಡ:

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರು ದರಗಳು ಭಾರಿ ನಷ್ಟಕ್ಕೀಡಾಯಿತು. ಎಸ್‌ಬಿಐ ಷೇರು ದರ 5% ನಷ್ಟಕ್ಕೀಡಾಯಿತು. ಬ್ಯಾಂಕ್‌ ಆಫ್‌ ಬರೋಡಾ, ಪಿಎನ್‌ಬಿ ಮತ್ತು ಐಸಿಐಸಿಐ ಬ್ಯಾಂಕ್‌ ಷೇರು ದರ ಇಳಿಯಿತು. ಅದಾನಿ ಗ್ರೂಪ್‌ ಪಡೆದಿರುವ ಸಾಲದಲ್ಲಿ ಸುಮಾರು 40% ರಷ್ಟು ಭಾರತೀಯ ಬ್ಯಾಂಕ್‌ಗಳದ್ದಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆ ಹೊರ ಹರಿವು:

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಜನವರಿಯಲ್ಲಿ 16,766 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಬುಧವಾರ ಒಂದೇ ದಿನ 2,394 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದರು. ವಿದೇಶಿ ಹೂಡಿಕೆದಾರರು ಭಾರತದಿಂದ ಚೀನಾಕ್ಕೆ ಷೇರು ಹೂಡಿಕೆಯನ್ನು ವರ್ಗಾಯಿಸುತ್ತಿದ್ದಾರೆ.

ಫ್ಯೂಚರ್‌ & ಆಪ್ಷನ್‌ ವ್ಯವಹಾರ:

ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್‌ & ಆಪ್ಷನ್‌ ವ್ಯವಹಾರಗಳಲ್ಲಿ ಎಫ್‌ಐಐಗಳ ಲಾಂಗ್ ಪೊಸಿಶನ್‌ಗಳಲ್ಲಿ 23,000 ಕಾಂಟ್ರ್ಯಾಕ್ಟ್‌ಗಳಿಗೆ ಇಳಿಕೆಯಾಗಿರುವುದು ಕೂಡ ಪ್ರಭಾವ ಬೀರಿತು.

ಬಜೆಟ್‌ ಪೂರ್ವ ಕಂಪನ: ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, ಷೇರು ಹೂಡಿಕೆಗೆ ಲಾಂಗ್‌ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ ದರವನ್ನು ಏರಿಸಿದರೆ ಷೇರು ಸೂಚ್ಯಂಕ ಕುಸಿಯುವ ಸಾಧ್ಯತೆ ಇದೆ. ಈ ಕುರಿತ ಆತಂಕ ಕೂಡ ನಕಾರಾತ್ಮಕ ಪ್ರಭಾವ ಬೀರಿತು.

ಬಾಂಡ್‌ ಆದಾಯ ಏರಿಕೆ: ಭಾರತೀಯ ಸರ್ಕಾರದ ಬಾಂಡ್‌ಗಳ ದರದಲ್ಲಿ ಶುಕ್ರವಾರ ಏರಿಕೆ ದಾಖಲಾಗಿದೆ. ಕಳೆದ ಮೂರು ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಕಚ್ಚಾ ತೈಲ ದರ ಹೆಚ್ಚಳ: ಚೀನಾದಲ್ಲಿ ಕೋವಿಡ್‌ ಬಿಕ್ಕಟ್ಟು ಉಪಶಮನವಾಗುತ್ತಿದ್ದು, ಆರ್ಥಿಕ ಚಟುವಟಿಕೆಗಳು ಚೇತರಿಸುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಏರಿಕೆಯಾಗಿದೆ. ಇದು ಷೇರು ಪೇಟೆ ಮೇಲೆ ಪ್ರತಿಕೂಲ ಪ್ರಭಾವ ಬೀರಿತು.

Exit mobile version