ಮುಂಬಯಿ: ಭಾರತದಲ್ಲಿ ಹೆಚ್ಚಿದ ಹಣದುಬ್ಬರ ಪರಿಣಾಮ ಮುಂದಿನ ದಿನಗಳಲ್ಲಿ ಆರ್ ಬಿಐ ಪುನಃ ಬಡ್ಡಿದರ ಏರಿಸುವ ಸಾಧ್ಯತೆ ಇರುವುದು ಷೇರುಪೇಟೆಯ ಮೇಲೆ ಇಂದು ಪ್ರತಿಕೂಲ ಪರಿಣಾಮವನ್ನು ಬೀರಿತು. ಜೊತೆಗೆ ( Sensex) ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಕೂಡಾ ಪೇಟೆ ಇಳಿಮುಖವಾಗಲು ಕಾರಣವಾಯಿತು.
ಬೆಳಿಗ್ಗೆ ನಿಫ್ಟಿ 36 ಅಂಕಗಳ ಇಳಿಕೆಯೊಂದಿಗೆ 17087 ರಲ್ಲಿ ಆರಂಭವಾದರೆ, ಸೆನ್ಸೆಕ್ಸ್ 113 ಅಂಕಗಳ ಕಡಿತದೊಂದಿಗೆ 57512 ರಲ್ಲಿ ಪ್ರಾರಂಭವಾಯಿತು. ಬ್ಯಾಂಕ್ ನಿಫ್ಟಿ ಸಹ 160 ಅಂಕಗಳ ಇಳಿಕೆಯೊಂದಿಗೆ 38957 ಅಂಶಗಳಿಗೆ ವಹಿವಾಟು ಶುರುವಾಯಿತು. ಮಾರುಕಟ್ಟೆ ಪ್ರಾರಂಭವಾದಾಗಿನಿಂದಲೂ ಇಳಿಕೆಯಾಗುತ್ತಲೇ ಸಾಗಿತು ಆದರೆ ಮಧ್ಯಾಹ್ನ 12 ಗಂಟೆ ನಂತರ ಪುಟಿದ್ದೆದ್ದು ಪುನಃ ಮಧ್ಯಾಹ್ನ 2 ಗಂಟೆ ನಂತರ ಇಳಿಮುಖವಾಯಿತು.
ದಿನದ ಅಂತ್ಯಕ್ಕೆ ನಿಫ್ಟಿ 109 ಅಂಕಗಳ ಕುಸಿತದೊಂದಿಗೆ 17014 ರಲ್ಲಿ ಮತ್ತು ಸೆನ್ಸೆಕ್ಸ್ 390 ಅಂಶಗಳ ಇಳಿಕೆಯೊಂದಿಗೆ 57235 ಕ್ಕೆ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 494 ಅಂಕಗಳ ಕುಸಿತದೊಂದಿಗೆ 38624 ಕ್ಕೆ ಅಂತ್ಯಗೊಂಡಿತು. ಬ್ಯಾಂಕ್ ನಿಫ್ಟಿ ಬೆಳಿಗ್ಗೆ ನಕಾರಾತ್ಮಕವಾಗಿ ಆರಂಭವಾದರೂ ಪ್ರಮುಖ ಸರ್ಪೋಟ್ ಆಗಿದ್ದ 38900 ಅಂಕಗಳಿಗಿಂತ ಕೆಳಗೆ ವಹಿವಾಟು ಆರಂಭವಾದ ನಂತರ ಹೆಚ್ಚು ಇಳಿಕೆ ಕಂಡಿತು. ನಿಫ್ಟಿ ಪ್ರಮುಖ ಘಟ್ಟವಾದ 200 ದಿನಗಳ ಮೂವಿಂಗ್ ಆವರೆಜ್ ಸಮೀಪ ವಹಿವಾಟು ಅಂತ್ಯವಾಗಿದ್ದು ನಾಳೆ ಇದರ ಕೆಳಗೆ ವಹಿವಾಟು ನಡೆಸಲಿದೆಯೇ ಎಂಬ ಕುತೂಹಲ ಇದೆ.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.50 ರಷ್ಟು ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.93 ಇಳಿಕೆಯಾಯಿತು. ಷೇರುಪೇಟೆಯಲ್ಲಿ ಮಾಧ್ಯಮ, ಲೋಹ ಮತ್ತು ಔಷಧ ವಲಯದ ಸೂಚ್ಯಂಕ ಏರಿಕೆ ಕಂಡರೆ ಬ್ಯಾಂಕಿಂಗ್, ಐಟಿ, ರಿಯಾಲಿಟಿ, ಮೂಲಸೌಕರ್ಯ ವಲಯದ ಸೂಚ್ಯಂಕಗಳು ಇಳಿಕೆ ದಾಖಲಿಸಿದವು
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 1636 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 753 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರು. ಬೆಳ್ಳಿ ಇಂದು ಪ್ರತಿ ಕೆಜಿಗೆ 570 ರೂ ಹೆಚ್ಚಳವಾಗಿದೆ.
ಇನ್ಫೋಸಿಸ್ ತ್ರೈಮಾಸಿಕ ಫಲಿತಾಂಶ:
ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್ ಇಂದು ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಉತ್ತಮ ಲಾಭ ಗಳಿಸಿದೆ ಎಂದು ಮಾರುಕಟ್ಟೆಗೆ ತಿಳಿಸಿದೆ.
ಜಾಗತಿಕ ಹಿಂಜರಿತದ ಭೀತಿ ಕಂಪನಿಯ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ ಮತ್ತು ಕಂಪನಿ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ನಿನ್ನೆ ತ್ರೈಮಾಸಿಕ ಫಲಿತಾಂಶ ಪ್ರಟಿಸಿದ್ದ ಹೆಚ್ಸಿಎಲ್ ಟೆಕ್ನಾಲಜಿಯ ಇಂದಿನ ಷೇರಿನ ಬೆಲೆ ಶೇ. 3.1 ರಷ್ಟು ಏರಿಕೆ ಕಂಡರೆ, ವಿಪ್ರೋ ಶೇ. 7ರಷ್ಟು ಕುಸಿತ ದಾಖಲಿಸಿತು.
ನಾಳೆ ಪ್ರಮುಖ ಕಂಪನಿಗಳಾದ ಬಜಾಜ್ ಆಟೋ, ಟಾಟಾ ಎಲೆಕ್ಸಿ ಮತ್ತು ಫೆಡರಲ್ ಬ್ಯಾಂಕ್ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ
ಅಮೇರಿಕಾ ಹಣದುಬ್ಬರ ಶೇ. 8.2
ಅಮೇರಿಕಾದ ಸೆಪ್ಟೆಂಬರ್ ತಿಂಗಳ ಹಣದುಬ್ಬರ ಪ್ರಕಟವಾಗಿದ್ದು ಶೇ. 8.2 ರಷ್ಟಾಗಿದೆ. ಆದರೆ ಮಾರುಕಟ್ಟೆ ಶೇ. 8.1 ರಷ್ಟು ಅಂಕಿಅಂಶ ಬರಬಹುದು ಎಂದು ನಿರೀಕ್ಷಿಸಿತ್ತು. ಹಣದುಬ್ಬರ ದರ ನಿರೀಕ್ಷೆಗಿಂತ ಹೆಚ್ಚಾಗಿ ಬಂದಿರುವುದರಿಂದ ಷೇರು ಮಾರುಕಟ್ಟೆಗೆ ನಕಾರಾತ್ಮಕ ಅಂಶವಾಗಬಹುದು ಮತ್ತು ಫೆಡರಲ್ ಬ್ಯಾಂಕ್ ಪುನಃ ಬಡ್ಡಿದರ ಏರಿಸುವ ಸಾಧ್ಯತೆ ಇದೆ.