ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ (BSE) ಸೆನ್ಸೆಕ್ಸ್ (sensex) ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ 700ಕ್ಕೂ ಹೆಚ್ಚು ಅಂಕ ಕುಸಿತಕ್ಕೀಡಾಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ (nifty) 212 ಅಂಕ ಕುಸಿದು 17,612 ಕ್ಕೆ ಇಳಿಯಿತು. ಮಧ್ಯಾಹ್ನ 1.15ರ ವೇಳೆಗೆ ಸೆನ್ಸೆಕ್ಸ್ 707 ಅಂಕ ನಷ್ಟದಲ್ಲಿ ೫೯,೯೬೫ ಕ್ಕೆ ಇಳಿದು 59,963ಕ್ಕೆ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 217 ಅಂಕ ನಷ್ಟದಲ್ಲಿ 17,608ಕ್ಕೆ ವಹಿವಾಟು ನಡೆಸುತ್ತಿತ್ತು. ಬುಧವಾರ ಬಿಎಸ್‌ಇ ಮಾರುಕಟ್ಟೆಯ ಮೌಲ್ಯದಲ್ಲಿ 3 ಲಕ್ಷ ಕೋಟಿ ರೂ. ಕುಸಿತಕ್ಕೀಡಾಗಿದ್ದು, 262 ಲಕ್ಷ ಕೋಟಿ ರೂ.ಗೆ ತಗ್ಗಿದೆ. ಕಳೆದ 4 ದಿನದಲ್ಲಿ ಹೂಡಿಕೆದಾರರಿಗೆ ಒಟ್ಟು 7 ಲಕ್ಷ ಕೋಟಿ ರೂ. ನಷ್ಟವಾಗಿದೆ. (Sensex market crash) ಮುಖ್ಯವಾಗಿ ಬಡ್ಡಿ ದರಗಳರ ಏರುಗತಿ ಪಡೆಯುವ ಆತಂಕ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್ 1500 ಅಂಕ ನಷ್ಟಕ್ಕೀಡಾಗಿದೆ. ಷೇರು ಸೂಚ್ಯಂಕ ನಷ್ಟಕ್ಕೆ ಕಾರಣವನ್ನು ನೋಡೋಣ.
ರಷ್ಯಾ-ಉಕ್ರೇನ್-ಅಮೆರಿಕ ಸಂಘರ್ಷ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಮೆರಿಕದ ಜತೆಗಿನ ಸ್ಟಾರ್ಟ್ ನ್ಯೂಕ್ಲಿಯರ್ ಆರ್ಮ್ಸ್ ಪರಮಾಣು ಒಪ್ಪಂದದಿಂದ ಹೊರ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತಳಮಳ ಸೃಷ್ಟಿಸಿದೆ. ರಷ್ಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ರಾಜಕೀಯ ಪರಿಸ್ಥಿತಿ ಪ್ರಕ್ಷುಬ್ಧವಾಗಿರುವುದು ಷೇರು ಮಾರುಕಟ್ಟೆ ಮೇಲೆ ಪ್ರತಿಕೂಲ ಪ್ರಭಾವ ಬೀರಿತು.
ಜಾಗತಿಕ ಮಾರುಕಟ್ಟೆಯ ಮಂದಗತಿ:
ಜನವರಿಯಲ್ಲಿ ಜಾಗತಿಕ ಮಾರುಕಟ್ಟೆ ಮತ್ತೆ ಮಂದಗತಿಗೆ ತಿರುಗಿದೆ. ಎಸ್&ಪಿ 500 ಸೂಚ್ಯಂಕ ಬುಧವಾರ 2% ಕುಸಿಯಿತು. ಡಿಸೆಂಬರ್ ಬಳಿಕ ಸೂಚ್ಯಂಕದ ತೀವ್ರ ಕುಸಿತ ಇದಾಗಿದೆ. ಡವ್ ಜಾಬ್ಸ್ ಇಂಡಸ್ಟ್ರಿಯಲ್ ಎವರೇಜ್ 697 ಅಂಕಗಳನ್ನು ಕಳೆದುಕೊಂಡಿತು. ನಾಸ್‌ಡಾಕ್ ಕಂಪೋಸಿಟ್ 2.5% ಇಳಿಯಿತು. ಏಷ್ಯಾದಲ್ಲೂ ಸೂಚ್ಯಂಕಗಳು ಇಳಿಯಿತು. ಜಪಾನ್‌ನ ನಿಕ್ಕಿ 1.34% ಕುಸಿಯಿತು.
ಬಡ್ಡಿ ದರ ಏರಿಕೆ ಭೀತಿ:
ಅಮೆರಿಕದ ಆರ್ಥಿಕತೆಯ ಅಂಕಿ ಅಂಶಗಳು ಜಾಗತಿಕ ಷೇರು ಪೇಟೆಯ ಮೇಲೆ ಪ್ರಭಾವ ಬೀರುತ್ತಿವೆ. ಅಮೆರಿಕದಲ್ಲಿ ಹಣದುಬ್ಬರದ ಇಳಿಕೆ ಮಂದಗತಿಯಲ್ಲಿರುವುದು ಮತ್ತಷ್ಟು ಬಡ್ಡಿ ದರ ಏರಿಕೆಯ ಅಪಾಯವನ್ನು ಸೃಷ್ಟಿಸಿದೆ. ಇದು ಷೇರು ಮಾರುಕಟ್ಟೆಗೆ ಕಳವಳಕಾರಿಯಾಗಿ ಪರಿಣಮಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಸುದೀರ್ಘ ಅವಧಿಗೆ ಏರಿಸಬಹುದು ಎಂದು ಜಿಯೊಜಿತ್ ಫೈನಾನ್ಷಿಯಲ್ ಸರ್ವೀಸ್‌ನ ಡಾ. ವಿಕೆ ವಿಜಯ ಕುಮಾರ್ ತಿಳಿಸಿದ್ದಾರೆ.
ಅದಾನಿ ಷೇರುಗಳ ಪತನ:
ಅದಾನಿ ಕಂಪನಿಗಳ ಷೇರುಗಳು ಬುಧವಾರ ಮತ್ತೆ ಪತನವನ್ನು ಮುಂದುವರಿಸಿವೆ. ಅದಾನಿ ಎಂಟರ್‌ಪ್ರೈಸಸ್ ಷೇರು ದರ 8% ಕುಸಿಯಿತು. ಅದಾನಿ ಸಮೂಹದ 10 ಷೇರುಗಳ ದರ ಇಳಿಯಿತು. ಬುಧವಾರ ಅದಾನಿ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 40,000 ಕೋಟಿ ರೂ. ನಷ್ಟ ಸಂಭವಿಸಿತು.
ಆರ್‌ಬಿಐ ಟಿಪ್ಪಣಿ:
ಆರ್‌ಬಿಐ ಬುಧವಾರ ಆರ್ಥಿಕತೆ ಕುರಿತ ತನ್ನ ಟಿಪ್ಪಣಿಯನ್ನು ಬಿಡುಗಡೆ ಮಾಡಲಿದೆ. ಇದು ಆರ್‌ಬಿಐನ ಮುಂದಿನ ನಡೆಯ ಬಗ್ಗೆಯೂ ಸುಳಿವು ನೀಡಲಿದೆ. ಇತ್ತೀಚೆಗೆ ಆರ್‌ಬಿಐ 0.25% ರಷ್ಟು ಬಡ್ಡಿ ದರ ಏರಿಸಿತ್ತು. ಆರ್‌ಬಿಐ ಟಿಪ್ಪಣಿಗೆ ಮುನ್ನ ಸೂಚ್ಯಂಕ ಕುಸಿದಿದೆ.
ತಾಂತ್ರಿಕ ಕಾರಣಗಳು: ನಿಫ್ಟಿ 17800ರ ಮಟ್ಟದಲ್ಲಿ ನಿರ್ಣಾಯಕ ಸಪೋರ್ಟ್ ಝೋನ್‌ಗೆ ತಲುಪಿತ್ತು. ಆ ಹಂತದಲ್ಲಿ ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ ಪಡೆದಿರುವುದರಿಂದ ಸೂಚ್ಯಂಕ ಕುಸಿಯಿತು. 17350 ಅಂಕಗಳ ಮಟ್ಟದಲ್ಲಿ ಮತ್ತೊಂದು ಸಪೋರ್ಟ್ ಲೆವೆಲ್ ಇದೆ ಎನ್ನುತ್ತಾರೆ ತಜ್ಞರು.
ಎಫ್‌ಐಐ ಹೂಡಿಕೆ ಹಿಂತೆಗೆತ: ಡಾಲರ್ ಹೂಡಿಕೆ ಚೀನಾ ಮತ್ತು ಇತರ ಎಮರ್ಜಿಂಗ್ ಮಾರುಕಟ್ಟೆಗೆ ಹರಿದು ಹೋಗುತ್ತಿದ್ದು, ಷೇರು ಸೂಚ್ಯಂಕ ಕುಸಿತಕ್ಕೆ ಕಾರಣವಾಯಿತು.
ಅಮೆರಿಕದಲ್ಲಿ ಬಾಂಡ್ ಗಳಿಕೆ: ಅಮೆರಿಕದಲ್ಲಿ 2 ವರ್ಷಗಳ ಬಾಂಡ್‌ಗಳಲ್ಲಿ ಆದಾಯ 4%ಕ್ಕೆ ಏರಿಕೆಯಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸುತ್ತಿದೆ.