ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಬೆಳಗ್ಗೆಯಿಂದಲೇ ಭಾರಿ ಕುಸಿತಕ್ಕೀಡಾಯಿತು. (Stock market today) ಮಧ್ಯಂತರದಲ್ಲಿ 11.30ಕ್ಕೆ 850 ಅಂಕಗಳನ್ನು ಕಳೆದುಕೊಂಡಿದ್ದು, ೬೦,೨೨೩ಕ್ಕೆ ಮುಗ್ಗರಿಸಿತು. ನಿಫ್ಟಿ 222 ಅಂಕ ಕಳೆದುಕೊಂಡು 17,895ಕ್ಕೆ ವಹಿವಾಟು ನಡೆಸುತ್ತಿತ್ತು. ಹಲವಾರು ವಲಯಗಳಲ್ಲಿ ಷೇರುಗಳ ದರ ಮಂದಗತಿಗೆ ತಿರುಗಿತ್ತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಮಾರುತಿ ಸುಜುಕಿ, ( Maruti Suzuki) ಎಚ್‌ಯುಎಲ್, ಟಾಟಾ ಸ್ಟೀಲ್ ಹೊರತುಪಡಿಸಿ ಉಳಿದ ಬಹುತೇಕ ಪ್ರಮುಖ ಷೇರುಗಳು ನಷ್ಟಕ್ಕೀಡಾಯಿತು. ಎಸ್‌ಬಿಐ, ಎಲ್&ಟಿ, ಇಂಡಸ್‌ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್ ಹೆಚ್ಚು ನಷ್ಟಕ್ಕೀಡಾಯಿತು. ಹಾಗಾದರೆ ದಲಾಲ್ ಸ್ಟ್ರೀಟ್ ಕಂಪನಕ್ಕೆ ಕಾರಣವೇನು?
ವಿದೇಶಿ ಸಾಂಸ್ಥಿಕ ಹೂಡಿಕೆ ಹೊರ ಹರಿವು (FII Selling): ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 760 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಈ ತಿಂಗಳು ಇದುವರೆಗೆ 17,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಟ್ರೆಂಡ್ ನಕಾರಾತ್ಮಕ ಪ್ರಭಾವ ಬೀರಿತು.
ಅದಾನಿ ಷೇರುಗಳ ಹಿನ್ನಡೆ (Adani Group shares fall)
ಅದಾನಿ ಪೋರ್ಟ್ ಮತ್ತು ಅದಾನಿ ಎಂಟರ್‌ಪ್ರೈಸಸ್ ನಿಫ್ಟಿ ಪ್ಯಾಕ್‌ನಲ್ಲಿ ಹೆಚ್ಚು ನಷ್ಟಕ್ಕೀಡಾಗಿವೆ. ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಕಂಪನಿಯು ಅದಾನಿ ಗ್ರೂಪ್‌ನಿಂದ ಷೇರು ವಹಿವಾಟುಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ದರ ಕುಸಿತಕ್ಕೀಡಾಯಿತು. ಅದಾನಿ ಸಮೂಹದ ಎಲ್ಲ 10 ಕಂಪನಿಗಳ ಷೇರು ದರ ಬುಧವಾರ ಕುಸಿಯಿತು.
ಎಫ್&ಒ ಎಕ್ಸ್‌ಪೈರಿ ದಿನ: ಫ್ಯೂಚರ್ & ಆಪ್ಷನ್ಸ್ (F&O) ವಹಿವಾಟಿಗೆ ಸಂಬಂಧಿಸಿ ಡಿರೈವಟಿವ್‌ಗಳ ಮಾಸಿಕ ಒಪ್ಪಂದದ ಅವಧಿ ಇಂದು ಮುಕ್ತಾಯವಾದ್ದರಿಂದ, ಅದು ನಕಾರಾತ್ಮಕ ಪ್ರಭಾವ ಬೀರಿತು.
ಜಾಗತಿಕ ಮಾರುಕಟ್ಟೆ ಎಫೆಕ್ಟ್: ಅಮೆರಿಕ ಮತ್ತು ಯುರೋಪಿನ ಷೇರು ಮಾರುಕಟ್ಟೆಗಳಲ್ಲಿ ಬುಧವಾರ ಸೂಚ್ಯಂಕಗಳು ಕುಸಿದಿತ್ತು. ಅಲ್ಲಿ ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಷೇರು ಸೂಚ್ಯಂಕಗಳು ಕುಸಿಯುತ್ತಿವೆ.
ಬಜೆಟ್ ಪೂರ್ವ ಆತಂಕ
ಫೆಬ್ರವರಿ 1ರಂದು 2023-24 ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಅಮೆರಿಕದ ಫೆಡರಲ್ ರಿಸರ್ವ್ ಸಭೆ ಜನವರಿ 31-ಫೆಬ್ರವರಿ 1ರಂದು ನಡೆಯಲಿದೆ.
ಕಚ್ಚಾ ತೈಲ ದರ ಏರಿಕೆ: ಕಚ್ಚಾ ತೈಲ ದರ ಬುಧವಾರ ಪ್ರತಿ ಬ್ಯಾರೆಲ್‌ಗೆ 80.39 ಡಾಲರ್‌ಗೆ ವೃದ್ಧಿಸಿದೆ. ಚೀನಾ ಶೀಘ್ರದಲ್ಲಿಯೇ ಕೋವಿಡ್-19 ಬಿಕ್ಕಟ್ಟಿನಿಂದ ಹೊರಬರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದೆ. ಆದರೆ ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು.