Site icon Vistara News

Sensex | ವಿದೇಶಿ ಹೂಡಿಕೆ ಹೆಚ್ಚಳ, ಸೆನ್ಸೆಕ್ಸ್‌ 374 ಅಂಕ ಜಿಗಿತ

sensex up

ಮುಂಬಯಿ: ಭಾರತದ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪುನಃ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿರುವ ಪರಿಣಾಮ ಇಂದು ನಿಫ್ಟಿ ಮತ್ತು ಸೆನ್ಸೆಕ್ಸ್ ( Sensex) ಉತ್ತಮ ವಹಿವಾಟು ನಡೆಸಿದವು.
ಜಾಗತಿಕ ಅಸ್ಥಿರತೆಯ ನಡುವೆಯೂ ಇಂದು ನಿಫ್ಟಿ 118 ಅಂಕಗಳ ಏರಿಕೆಯೊಂದಿಗೆ 18130 ರಲ್ಲಿ ಆರಂಭಗೊಂಡಿತು. ಸೆನ್ಸೆಕ್ಸ್ 319 ಅಂಶಗಳ ಹೆಚ್ಚಳದೊಂದಿಗೆ 61065 ರಲ್ಲಿ ಪ್ರಾರಂಭಗೊಂಡಿತು. ಅದೇ ರೀತಿ ಬ್ಯಾಂಕ್ ನಿಫ್ಟಿ ಸಹ 244 ಅಂಕಗಳ ಏರಿಕೆಯೊಂದಿಗೆ 41552 ರಲ್ಲಿ ಶುರುವಾಯಿತು.
ನಿಫ್ಟಿ ಉತ್ತಮ ಆರಂಭ ಪಡೆದು ರೆಜಿಸ್ಟೇಸ್ ಮಟ್ಟವಾದ 18175 ರವರೆಗೆ ಏರಿಕೆಯಾಯಿತು. ನಂತರ ಹೂಡಿಕೆದಾರರು ಲಾಭಾಂಶ ನಗದೀಕರಣಕ್ಕೆ ಮುಂದಾದರು. ಮಧ್ಯಾಹ್ನ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳಿಗೆ ಬೇಡಿಕೆ ವ್ಯಕ್ತವಾದ ಕಾರಣ ದಿನದ ಅಂತ್ಯಕ್ಕೆ ನಿಫ್ಟಿ ಪುನಃ ಚೇತರಿಸಿಕೊಂಡು 133 ಅಂಕಗಳ ಏರಿಕೆಯೊಂದಿಗೆ 18145 ರಲ್ಲಿ ಅಂತ್ಯಗೊಂಡಿತು. ಬ್ಯಾಂಕ್ ನಿಫ್ಟಿ ಆರಂಭದ ಏರಿಕೆಯಿಂದ ರೆಜಿಸ್ಟೇಸ್ ಲೆವೆಲ್ ಆದ 41670 ರವರೆಗೆ ಏರಿಕೆ ಕಂಡಿತು. 41670 ಅಂಶವನ್ನು ಬ್ಯಾಂಕ್ ನಿಫ್ಟಿ ಸೆಪ್ಟೆಂಬರ್ 20 ರಂದು ತಲುಪಿತ್ತು. ಇದು ಟೆಕ್ನಿಕಲಿ ಡಬಲ್ ಟಾಪ್ ಆದ್ದರಿಂದ ಲಾಭಾಂಶ ಒತ್ತಡಕ್ಕೆ ಒಳಗಾಗಿ ಇಳಿಕೆಯಾಯಿತು. ಮತ್ತು ಪೂಚ್ಯರ್ ಅಂಡ್ ಆಪ್ಷನ್ ಮಾರುಕಟ್ಟೆಯಲ್ಲಿನ ಫಿನ್ ನಿಫ್ಟಿಯ ವಾರದ ವಾಯಿದೆ ದಿನವಾಗಿದ್ದರಿಂದ ಹೆಚ್ಚು ಏರಿಳಿತ ಇತ್ತು. ದಿನದ ಅಂತ್ಯಕ್ಕೆ 18 ಅಂಕಗಳ ಇಳಿಕೆಯೊಂದಿಗೆ 41289 ರಲ್ಲಿ ಮುಕ್ತಾಯವಾಯಿತು. ಸೆನ್ಸೆಕ್ಸ್ ಸಹ 374 ಅಂಕಗಳ ಏರಿಕೆಯೊಂದಿಗೆ 61121 ರಲ್ಲಿ ಪೂರ್ಣಗೊಂಡಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.22 ರಷ್ಟು ಏರಿಕೆ ಕಂಡರೆ ಮಧ್ಯಮ ಕಂಪನಿಗಳ ಸೂಚ್ಯಂಕ 0.83 ರಷ್ಟು ಹೆಚ್ಚಳವಾಯಿತು. ಔಷಧ, ಲೋಹ, ರಿಯಾಲಿಟಿ, ಐಟಿ ಸೂಚ್ಯಂಕ ಏರಿಕೆ ಕಂಡರೆ, ಬ್ಯಾಂಕಿಂಗ್ ಮತ್ತು ಮಾಧ್ಯಮ ಸೂಚ್ಯಂಕಗಳು ಇಳಿಕೆಯಾದವು. ಇಂದು ಸಹ ಸಿಮೆಂಟ್ ವಲಯದ ಎಲ್ಲ ಷೇರುಗಳು ಏರಿಕೆಯಾದವು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಏಥೇನಾಲ್ ಬೆಲೆಯನ್ನು ಏರಿಸಬಹುದು ಎಂಬ ಸುದ್ದಿಯ ಹಿನ್ನಲೆಯಲ್ಲಿ ಸಕ್ಕರೆ ವಲಯದ ಎಲ್ಲ ಷೇರುಗಳು ಭಾರಿ ಏರಿಕೆಯಾದವು.
ಇಂದು ಸಹ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2609 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 730 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.
ಬಡ್ಡಿದರ ಏರಿಕೆ ಸಾಧ್ಯತೆ
ನಾಳೆ ರಾತ್ರಿ ಅಮೇರಿಕಾದ ಫೆಡರಲ್ ಬ್ಯಾಂಕಿನ ಬಡ್ಡಿದರ ಪರಿಷ್ಕರಣೆ ಸಭೆ ಇದ್ದು ಶೇ.0.75 ರಷ್ಟು ಬಡ್ಡಿದರವನ್ನು ಪುನಃ ಏರಿಸಬಹುದು ಎಂದು ಮಾರುಕಟ್ಟೆ ನಿರೀಕ್ಷಿಸಿದೆ. ಫೆಡರಲ್ ಬ್ಯಾಂಕ್ ಸತತವಾಗಿ ನಾಲ್ಕು ಸಲ ಬಡ್ಡಿದರವನ್ನು ಏರಿಕೆ ಮಾಡಿದ್ದರೂ ಅಮೇರಿಕಾದಲ್ಲಿ ಹಣದುಬ್ಬರ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗುತ್ತಿಲ್ಲ.
ಅದೇ ರೀತಿ ಭಾರತದಲ್ಲೂ ಸಹ ಹಣದುಬ್ಬರ ದರ ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ನಿರತಂರವಾಗಿ ಬಡ್ಡಿದರವನ್ನು ಏರಿಕೆ ಮಾಡುತ್ತಿದೆ, ಆದರೂ ಸಹ ಹಣದುಬ್ಬರ ದರ ನಿಗಧಿತ ಶೇ. 6 ಕ್ಕಿಂತ ಕೆಳಗೆ ಇಳಿಕೆಯಾಗುತ್ತಿಲ್ಲ. ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಿಸರ್ವ್ ಬ್ಯಾಂಕ್ ವರದಿ ನೀಡಬೇಕಿದೆ. ಈ ಕಾರಣದಿಂದ ನವೆಂಬರ್ 3 ರಂದು ರಿಸರ್ವ್ ಬ್ಯಾಂಕಿನ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಪುನಃ ಶೇ.0.50 ರಷ್ಟು ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ.

Exit mobile version