ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 1,000ಕ್ಕೂ ಹೆಚ್ಚು ಅಂಕಗಳ ಏರಿಕೆ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಸೂಚ್ಯಂಕಗಳು ಚೇತರಿಸಿದ್ದು, ಹೂಡಿಕೆದಾರರನ್ನು ಉತ್ತೇಜಿಸಿತು. ಮಧ್ಯಾಹ್ನ 3 ಗಂಟೆಯ ವೇಳೆಗೆ ಸೆನ್ಸೆಕ್ಸ್ 55,935 ಹಾಗೂ ನಿಫ್ಟಿ 16,659 ಅಂಕ ದಾಖಲಿಸಿತ್ತು. ಸೆನ್ಸೆಕ್ಸ್ 1,026 ಹಾಗೂ ನಿಫ್ಟಿ 306 ಅಂಕ ಏರಿತ್ತು.
ಸೆನ್ಸೆಕ್ಸ್ ಚೇತರಿಕೆಯಿಂದ ಹೂಡಿಕೆದಾರರ ಸಂಪತ್ತಿನಲ್ಲಿ 4.4 ಲಕ್ಷ ಕೋಟಿ ರೂ.ಗಳ ಏರಿಕೆ ಉಂಟಾಯಿತು. ಬಿಎಸ್‌ಇಯಲ್ಲಿ ನೋಂದಣಿಯಾಗಿರುವ ಒಟ್ಟು ಷೇರುಗಳ ಮೌಲ್ಯವು 253 ಲಕ್ಷ ಕೋಟಿ ರೂ.ಗಳಿಂದ 257 ಲಕ್ಷ ಕೋಟಿ ರೂ.ಗೆ ಏರಿತು. ಹಾಗಾದರೆ ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿರುವ ಅಂಶಗಳು ಯಾವುದು?
ಅಮೆರಿಕದ ಷೇರು ಪೇಟೆ ಚೇತರಿಕೆ
ವಾಲ್ ಸ್ಟ್ರೀಟ್‌ನಲ್ಲಿ ಷೇರು ಸೂಚ್ಯಂಕಗಳ ಜಿಗಿತ ದಲಾಲ್ ಸ್ಟ್ರೀಟ್ ಮೇಲೆಯೂ ಸಕಾರಾತ್ಮಕ ಪ್ರಭಾವ ಬೀರಿತು. ಅಮೆರಿಕದಲ್ಲಿ ಕಳೆದ ಶುಕ್ರವಾರ ಷೇರು ಪೇಟೆ ಗಣನೀಯ ಚೇತರಿಸಿತ್ತು. ಅಮೆರಿಕದಲ್ಲಿ ಕಳೆದ ಏಪ್ರಿಲ್‌ನಲ್ಲಿ ಹಣದುಬ್ಬರ ಶೇ.6.3ಕ್ಕೆ ಇಳಿಕೆಯಾಗಿದ್ದು, 2020ರ ವೆಂಬರ್ ಬಳಿಕ ಮೊದಲ ಇಳಿಕೆಯಾಗಿದೆ. ಇದು ಹೂಡಿಕೆದಾರರಿಗೆ ಸಕಾರಾತ್ಮಕ ಎನ್ನಿಸಿತು.
ಚೀನಾದಲ್ಲಿ ಕೋವಿಡ್ ಕೇಸ್ ಇಳಿಕೆ
ಚೀನಾದ ಶಾಂಘೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಆರ್ಥಿಕ ಚಟುವಟಿಕೆಗಳು ಚೇತರಿಸುತ್ತಿವೆ. ಬೀಜಿಂಗ್ ನಲ್ಲೂ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ವಿಶ್ವದ ಎರಡನೇ ದೊಡ್ಡ ಆರ್ಥಿಕತೆಯ ಚೇತರಿಕೆ ಷೇರುಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು.
ಷೇರುಗಳ ಖರೀದಿ ಭರಾಟೆ
ಎಚ್‌ಡಿಎಫ್‌ಸಿ, ಇನ್ಫೋಸಿಸ್, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಸೋಮವಾರ ಭಾರಿ ಬೇಡಿಕೆ ಸೃಷ್ಟಿಯಾಯಿತು. ಸೆನ್ಸೆಕ್ಸ್ ಜಿಗಿತಕ್ಕೆ 550 ಅಂಕಗಳ ಕೊಡುಗೆಯನ್ನು ಈ ಷೇರುಗಳು ನೀಡಿತು. ಐಟಿ ಷೇರುಗಳು ಇತ್ತೀಚೆಗೆ ಕುಸಿದಿದ್ದರೂ, ಮತ್ತೆ ಚೇತರಿಸುವ ವಿಶ್ವಾಸ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ.
ರೂಪಾಯಿ ಬಲವರ್ಧನೆ: ಡಾಲರ್ ಎದುರು ರೂಪಾಯಿ ಸೋಮವಾರ 12 ಪೈಸೆ ಚೇತರಿಸಿ 77.46 ಕ್ಕೆ ಸ್ಥಿರವಾಯಿತು.
ಇದನ್ನೂ ಓದಿ: MODI 8 Years: ಎಂಟು ವರ್ಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ 3 ಪಟ್ಟು ಹೆಚ್ಚಳ, 1450 ಷೇರುಗಳ ಲಾಭ ಡಬಲ್!