ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಬೆಳಗ್ಗೆ ರೆಪೊ ದರದಲ್ಲಿ ಸತತ ನಾಲ್ಕನೇ ಬಾರಿಗೆ ಏರಿಕೆಯನ್ನು ಘೋಷಿಸಿದರೂ, ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ವಿಚಲಿತವಾಗಲಿಲ್ಲ, (RBI interest rate hike) ಬದಲಿಗೆ 700 ಅಂಕಗಳ ಜಿಗಿತ ದಾಖಲಿಸಿತು.
ಮಧ್ಯಾಹ್ನ 12.25ರ ವೇಳೆಗೆ ಸೆನ್ಸೆಕ್ಸ್ 57,109 ಅಂಕಗಳ ಏರಿಕೆ ದಾಖಲಿಸಿತ್ತು. ನಿಫ್ಟಿ 201 ಅಂಕ ಜಿಗಿದು 17,023 ಅಂಕಗಳಿಗೆ ವೃದ್ಧಿಸಿತ್ತು. ಬ್ಯಾಂಕಿಂಗ್, ಹಣಕಾಸು ಸೇವೆ, ಆಟೊಮೊಬೈಲ್, ರಿಯಾಲ್ಟಿ ವಲಯದ ಷೇರುಗಳು ಬೆಳಗ್ಗೆ ಚೇತರಿಸಿತ್ತು.
ಯಾವುದೇ ಅನಿರೀಕ್ಷಿತ ನಕಾರಾತ್ಮಕ ಘೋಷಣೆ ಇಲ್ಲ
ರೆಪೊ ದರವನ್ನು 5.9%ಕ್ಕೆ ಏರಿಸಿದ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾಡಿದ ಭಾಷಣ ಸಕಾರಾತ್ಮಕವಾಗಿತ್ತು. ಜತೆಗೆ ಅವರು ತಮ್ಮ ಭಾಷಣದಲ್ಲಿ ಯಾವುದೇ ಬಗೆಯ ಅನಿರೀಕ್ಷಿತ ದರ ಹೆಚ್ಚಳವನ್ನು ಘೋಷಿಸಲಿಲ್ಲ. ಕಳೆದ ಹಲವಾರು ದಿನಗಳಿಂದಲೂ ಆರ್‌ಬಿಐ 0.50% ಬಡ್ಡಿ ದರ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ ಷೇರು ಮಾರುಕಟ್ಟೆಯಲ್ಲಿ ಇತ್ತು. ಹೀಗಾಗಿ ಇವತ್ತು ಯಾವುದೇ ಅಚ್ಚರಿಯಾಗಲಿ, ಅನಿರೀಕ್ಷಿತ ನಡೆಯಾಗಲಿ ಕಂಡು ಬಂದಿರಲಿಲ್ಲ. ಎಲ್ಲವೂ ನಿರೀಕ್ಷೆಯ ಪ್ರಕಾರ ನಡೆದ ಪರಿಣಾಮ ಸೆನ್ಸೆಕ್ಸ್ 600 ಅಂಕ ಜಿಗಿಯಿತು. ಗವರ್ನರ್ ಶಕ್ತಿಕಾಂತ ದಾಸ್ ಸೂಕ್ಷ್ಮ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಿಸಿ ಷೇರು ಸೂಚ್ಯಂಕ ಮುಗ್ಗರಿಸದಂತೆ ನೋಡಿಕೊಂಡರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಮೆರಿಕದಲ್ಲಿ ಜೆರೋಮ್ ಪೊವೆಲ್ ಎಡವಿದ್ದರು
ಇತ್ತೀಚೆಗೆ ಅಮೆರಿಕದಲ್ಲಿ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಸಿದ ಬಳಿಕ, ಮುಖ್ಯಸ್ಥ ಜೆರೋಮ್ ಪೊವೆಲ್ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ್ಡಿ ದರ ಏರಿಕೆಯ ಅನಿವಾರ್ಯ ಇದೆ ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸಂಭವಿಸಿತ್ತು. ಆದರೆ ಭಾರತದಲ್ಲಿ ಸದ್ಯಕ್ಕೆ ಅಂಥ ಸನ್ನಿವೇಶ ಉಂಟಾಗಿಲ್ಲ. ಹಣದುಬ್ಬರವನ್ನು ನಿಯಂತ್ರಿಸಲು ಹಾಗೂ ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ ಕೈಗೊಂಡ ಕ್ರಮವನ್ನು ಷೇರು ಪೇಟೆ ಸ್ವಾಗತಿಸಿತು.
ದಾಸ್ ಸಕಾರಾತ್ಮಕ ಭಾಷಣದ ಮೋಡಿ
ಒಂದು ವೇಳೆ ಅನಿರೀಕ್ಷಿತವಾಗಿ ಬಡ್ಡಿ ದರವನ್ನು ಏರಿಸಿರುತ್ತಿದ್ದರೆ, ಭಾರತೀಯ ಷೇರು ಮಾರುಕಟ್ಟೆಯಲ್ಲೂ ಸೂಚ್ಯಂಕಗಳು ಭಾರಿ ಪತನಕ್ಕೀಡಾಗುವ ಅಪಾಯ ಇರುತ್ತಿತ್ತು. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳ ದರ ಇಳಿಮುಖವಾಗಿರುವುದು, ಕಚ್ಚಾ ತೈಲ ದರದಲ್ಲಿನ ಇತ್ತೀಚಿನ ಇಳಿಕೆ ಒಂದು ವೇಳೆ ಸ್ಥಿರವಾಗಿದ್ದರೆ, ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ತಗ್ಗಬಹುದು ಎಂಬ ಆತ್ಮ ವಿಶ್ವಾಸವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ವ್ಯಕ್ತಪಡಿಸಿದ್ದರು. ಇದು ಹೂಡಿಕೆದಾರರಲ್ಲಿ ಹುಮ್ಮಸ್ಸು ತುಂಬಿಸಿತು.