ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (sensex) ಗುರುವಾರ ಸತತ ಎಂಟನೇ ದಿನ ಏರಿಕೆ ದಾಖಲಿಸಿತು. ಸೆನ್ಸೆಕ್ಸ್ ೧೮೪ ಅಂಕ ಏರಿಕೆಯಾಗಿ ೬೩,೨೮೪ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 54 ಅಂಕ ಚೇತರಿಸಿ 18,812ಕ್ಕೆ ಸ್ಥಿರವಾಯಿತು.
ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು, ಡಿಸೆಂಬರ್ ಬಳಿಕ ಬಡ್ಡಿ ದರ ಏರಿಕೆ ಮಂದಗತಿ ಪಡೆದುಕೊಳ್ಳಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಚೇತರಿಕೆ ದಾಖಲಾಯಿತು.
ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್‌ನಲ್ಲಿ ನೀಡಿದ ಉಪನ್ಯಾಸದಲ್ಲಿ ಪೊವೆಲ್, ಫೆಡರಲ್ ರಿಸರ್ವ್ ಡಿಸೆಂಬರ್ ಸಭೆಯಲ್ಲಿ ಬಡ್ಡಿ ದರವನ್ನು ನಿಧಾನಗತಿಯ ಏರಿಕೆ ಮಾಡಲಿದೆ ಎಂಬ ಸುಳಿವು ನೀಡಿದರು.
ಕಾರುಗಳು, ಪೀಠೋಪಕರಣಗಳು, ಮನೆ ಬಾಡಿಗೆ ಇಳಿಕೆಯಾಗುತ್ತಿರುವುದು ಹಣದುಬ್ಬ ಉಪಶಮನವಾಗುತ್ತಿರುವ ಲಕ್ಷಣವಾಗಿದೆ. ಹೀಗಾಗಿ ಬಡ್ಡಿ ದರ ಏರಿಕೆಯ ತೀವ್ರತೆಯನ್ನು ಇಳಿಸಲು ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಭಾರತದ ಷೇರು ಮಾರುಕಟ್ಟೆಗೆ ಹೆಚ್ಚುತ್ತಿರುವ ರಿಟೇಲ್ ಹೂಡಿಕೆದಾರರ ಆಸಕ್ತಿ, ವಿದೇಶಿ ಹೂಡಿಕೆಯ ಒಳ ಹರಿವು, ಹಣದುಬ್ಬರ, ಜಿಡಿಪಿ ಕುರಿತ ಸಕಾರಾತ್ಮಕ ಅಂಕಿ ಅಂಶಗಳು ಸೂಚ್ಯಂಕದ ದಾಖಲೆಯ ಜಿಗಿತಕ್ಕೆ ಕಾರಣವಾಗಿದೆ.
ಮಾರುಕಟ್ಟೆ ಸತತವಾಗಿ ಮೂರನೇ ದಿನವೂ ಸಾರ್ವಕಾಲಿಕ ಏರಿಕೆಯಾಗಿದ್ದರಿಂದ ಅಲ್ಪಾವಧಿ ಹೂಡಿಕೆದಾರರು ಲಾಭಾಂಶ ಗಳಿಕೆಗೆ ಮುಂದಾದರು. ಇದರಿಂದ ಮಾರುಕಟ್ಟೆ ಆರಂಭದಿಂದಲೂ ಕುಸಿತವಾಗುತ್ತಲೇ ಸಾಗಿತು. ಮಧ್ಯಾಹ್ನ 1 ಗಂಟೆ ನಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಇನ್ನಷ್ಟು ಕುಸಿತವಾಯಿತು. ಆದರೆ ದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚು ಹೂಡಿಕೆ ಮುಂದುವರಿಸಿದ್ದರಿಂದ ದಿನದ ಅಂತ್ಯಕ್ಕೆ ಅಲ್ಪ ಏರಿಕೆಯೊಂದಿಗೆ ಮಾರುಕಟ್ಟೆ ಅಂತ್ಯವಾಯಿತು.
ಮಿಡ್ ಕ್ಯಾಪ್ ಷೇರುಗಳಿಗೆ ಬೇಡಿಕೆ:
ಕಳೆದ ಕೆಲವು ದಿನಗಳಿಂದ ಉತ್ತಮ ಏರಿಕೆ ದಾಖಲಿಸಿದ್ದ ಬ್ಯಾಂಕಿಂಗ್ ಷೇರುಗಳು ಲಾಭಾಂಶ ನಗದೀಕರಣದಿಂದ ಅಲ್ಪ ಇಳಿಕೆಯಾದವು. ಆದರೆ ಮಿಡ್ ಕ್ಯಾಪ್ ಷೇರುಗಳಿಗೆ ಉತ್ತಮ ಬೇಡಿಕೆ ಇದ್ದಿದ್ದರಿಂದ ಷೇರುಪೇಟೆಗೆ ಬೆಂಬಲ ವ್ಯಕ್ತವಾಯಿತು.
ದಿನದ ಅಂತ್ಯಕ್ಕೆ ನಿಫ್ಟಿ 54 ಅಂಕಗಳ ಏರಿಕೆಯೊಂದಿಗೆ 18812 ರಲ್ಲಿ ಮತ್ತು ಸೆನ್ಸೆಕ್ಸ್ 184 ಅಂಶಗಳ ಹೆಚ್ಚಳದೊಂದಿಗೆ 63285 ರಲ್ಲಿ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 29 ಅಧಿಕ ಅಂಕಗಳೊಂದಿಗೆ 43260 ರಲ್ಲಿ ವಹಿವಾಟು ಪೂರ್ಣಗೊಳಿಸಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.43 ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.86 ರಷ್ಟು ಏರಿಕೆಯಾಯಿತು. ಐಟಿ, ಲೋಹ, ರಿಯಾಲಿಟಿ, ಮಾಧ್ಯಮ ಕಂಪನಿಗಳ ಸೂಚ್ಯಂಕ ಏರಿಕೆಯಾದರೇ, ಇಂಧನ, ಎಫ್ಎಂಸಿಜಿ ಮತ್ತು ಆಟೋ ಕಂಪನಿಗಳ ಸೂಚ್ಯಂಕ ಇಳಿಕೆಯಾಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 1565 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೇ, ದೇಶಿ ಸಾಂಸ್ಥಿಕ ಹೂಡಿಕೆದಾರು 2664 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ