ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex ) ಶುಕ್ರವಾರ ಬೆಳಗ್ಗೆ 1,000 ಅಂಕಗಳ ಭಾರಿ ಏರಿಕೆ ದಾಖಲಿಸಿತು. ಬೆಳಗ್ಗೆ 9.17 ಕ್ಕೆ ಸೆನ್ಸೆಕ್ಸ್ 1,032 ಅಂಕ ವೃದ್ಧಿಸಿಕೊಂಡು 58,267 ಕ್ಕೆ ತಲುಪಿತು. ನಿಫ್ಟಿ 297 ಅಂಕ ಏರಿಕೊಂಡು 17,311ಕ್ಕೆ ತಲುಪಿತು. ಸೆನ್ಸೆಕ್ಸ್ ಜಿಗಿತದ ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ 4 ಲಕ್ಷ ಕೋಟಿ ರೂ. ಏರಿಕೆಯಾಯಿತು. ಬಿಎಸ್‌ಇನಲ್ಲಿ ನೋಂದಾಯಿತ ಷೇರುಗಳ ಮಾರುಕಟ್ಟೆ ಮೌಲ್ಯ 273 ಲಕ್ಷ ಕೋಟಿ ರೂ.ಗೆ ಏರಿತು.
ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವೇನು? : ಸತತ ಆರು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಅಮೆರಿಕದ ಷೇರು ಪೇಟೆ ಸೂಚ್ಯಂಕಗಳು ಚೇತರಿಸಿದ್ದು, ಸಕಾರಾತ್ಮಕ ಪ್ರಭಾವ ಬೀರಿತು. ಅಮೆರಿಕದಲ್ಲಿ ಹಣದುಬ್ಬರ ಇಳಿಕೆಯಾಗುವ ಲಕ್ಷಣ ತೋರಿಸಿದ್ದು, ಹೂಡಿಕೆದಾರರಲ್ಲಿ ಹುಮ್ಮಸ್ಸು ತುಂಬಿತು. ಏಷ್ಯಾದ ಮಾರುಕಟ್ಟೆಯಲ್ಲೂ ಸೂಚ್ಯಂಕಗಳು ಏರಿಕೆ ದಾಖಲಿಸಿತು.
ಕಚ್ಚಾ ತೈಲ ದರ ಇಳಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಮತ್ತು ಡಬ್ಲ್ಯುಟಿಐ ಕಚ್ಚಾ ತೈಲ ದರ ಇಳಿಕೆಯಾಗಿರುವುದು ಸಕಾರಾತ್ಮಕ ಪ್ರಭಾವ ಬೀರಿತು. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ 95 ಡಾಲರ್‌ಗೆ ಇಳಿಕೆಯಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಶುಕ್ರವಾರ ಬೆಳಗ್ಗೆ ತುಸು ಚೇತರಿಕೆ ಇತ್ತು. (82.21 ರೂ.)
ಐಟಿ ಕಂಪನಿಗಳ ಗಳಿಕೆ: ಇನ್ಫೋಸಿಸ್, ಟಸಿಎಸ್, ವಿಪ್ರೊ, ಎಚ್‌ಸಿಎಲ್ ಟೆಕ್ ಇತ್ಯಾದಿ ಐಟಿ ಕಂಪನಿಗಳ ಷೇರು ದರಗಳು ಏರಿಕೆ ದಾಖಲಿಸಿತು. ಕಂಪನಿಗಳು ಉತ್ತಮ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿರುವುದು ಇದಕ್ಕೆ ಕಾರಣ.